ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ಪಿಡಿಓ ವಾಸ ಕಡ್ಡಾಯ

Lingaraj Badiger
Updated On : 14 Mar 2013, 10:48 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 13
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ (ಪಿಡಿಓ)..,
ನೀವು ನಗರ ಪ್ರದೇಶದಲ್ಲಿ, ಇನ್ನಾವುದೋ ಹಳ್ಳಿಯಲ್ಲಿ ವಾಸವಾಗಿದ್ದೀರಾ. ಹಾಗಿದ್ದರೆ ನೀವು ಇನ್ನು ಮುಂದೆ ಅಲ್ಲಿ ವಾಸ ಮಾಡುವಂತ್ತಿಲ್ಲ. ನೀವು  ಸೇವೆ ಸಲ್ಲಿಸುತ್ತಿರುವ ಪಂಚಾಯ್ತಿಯ ಕೇಂದ್ರ ಸ್ಥಾನದಲ್ಲಿ ವಾಸವಾಗಬೇಕು.
ಎಷ್ಟು ದಿನದವರೆಗೆ, ನಿಮ್ಮ ಪಂಚಾಯ್ತಿಯಲ್ಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುವವರೆಗೆ. ಇದು, ಕಡ್ಡಾಯ.
- ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಇದಾಗಿದೆ.
ಸಭೆಯ ಆರಂಭದಲ್ಲಿ ಜಿಪಂ ಸದಸ್ಯೆ ಸವಿತಾ ರಮೇಶ್ ಮಾತನಾಡಿ, ಹಿಂದಿನ ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಆದರೆ, ಪರಿಹಾರ ಕಂಡುಕೊಂಡಿಲ್ಲ. ಮಲೆನಾಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು. ಅವಶ್ಯಕತೆ ಇರುವ ಕಡೆಗಳಲ್ಲಿ ಬೋರ್‌ವೆಲ್ ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬೋರ್‌ವೆಲ್ ವಿಫಲವಾಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಪಿಡಿಓಗಳಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಟೆಂಡರ್ ಕರೆಯುವಂತೆ ತಿಳಿಸಲಾಗಿದೆ. ಇದರ ಜತೆಗೆ  ಸಮಸ್ಯೆ ಇರುವ ಹಳ್ಳಿಗಳ ಮಾಹಿತಿ ಸಂಗ್ರಹ ಮಾಡುವಂತೆ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ಪಿಡಿಓಗಳು ಸ್ಪಂದಿಸುತ್ತಿಲ್ಲ: ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ತಕ್ಷಣಕ್ಕೆ ಪಿಡಿಓಗಳು ಸ್ಪಂದಿಸುತ್ತಿಲ್ಲ. ಕನಿಷ್ಟ ಮುಂದಿನ 2 ತಿಂಗಳಾದರೂ ಅವರು ಕೇಂದ್ರ ಸ್ಥಾನದಲ್ಲಿರಬೇಕು. ಈ ಸಂಬಂಧ ಸೂಚನೆ ನೀಡಬೇಕು ಎಂದು ಸದಸ್ಯ ಕಲ್ಮರಡಪ್ಪ ಆಗ್ರಹಿಸಿದರು. ಇದಕ್ಕೆ ಇತರೆ ಸದಸ್ಯರು ಸಹಮತ ಸೂಚಿಸಿದ್ದರಿಂದ ನಿರ್ಣಯ ಕೈಗೊಳ್ಳಲಾಯಿತು. ಬೋರ್‌ವೆಲ್‌ಗಳಿಗೆ ಮೋಟಾರ್ ಅಳವಡಿಸಲು ಹಣದ ಅವಶ್ಯಕತೆ ಇದೆ. ಬರಕ್ಕೆ ಬಂದಿರುವ ಹಣವನ್ನು ಮೋಟಾರ್ ಖರೀದಿಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಛೀಮಾರಿ ಗ್ಯಾರಂಟಿ: ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿಯನ್ನು ನೀಡುವಂತೆ ಕಳೆದ ಸಭೆಯಲ್ಲಿ ತಿಳಿಸಿದ್ದೀರಾ. ಪಟ್ಟಿಯನ್ನು ಸಹ ಕೊಟ್ಟಿದ್ದೇವೆ. ಆದರೆ, ಈವರೆಗೆ ಕ್ರಮ ವಹಿಸಿಲ್ಲ. ಮಲೆನಾಡಿನಲ್ಲೂ ನೀರಿನ ಅಭಾವ ತಲೆದೋರಿದೆ. ಜಿಪಂನಲ್ಲಿ ಕುಡಿಯುವ ನೀರು ಸರಬರಾಜಿಗೆ ಹಣ ಇಲ್ಲವೇ ಎಂದು ಜ್ಯೋತಿ ಹೇಮಶೇಖರ್ ಪ್ರಶ್ನಿಸಿದರು. ಈಶ್ವರಹಳ್ಳಿ ಸುತ್ತಮುತ್ತಲೂ ಸಮಸ್ಯೆ ಗಂಭೀರವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ ನಮಗೆ ಛೀಮಾರಿ ಹಾಕಲಿದ್ದಾರೆ. ಮೊದಲು ಮೆಸ್ಕಾಂನಿಂದ ಆಗಬೇಕಾಗಿರುವ ಕೆಲಸವನ್ನು ಆಗಲಿ ಎಂದು ಮುಗುಳವಳ್ಳಿ ನಿರಂಜನ್ ಹೇಳಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಸಮಯ ಕಡಿತಗೊಳಿಸುವಂತೆ ಶಿವಮೊಗ್ಗದ ಎಂಆರ್‌ಎಸ್‌ಗೆ ಮನವಿ ಮಾಡಿದ್ದೇವೆ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ಹೇಳಿದರು.
ಮಾಹಿತಿ ನೀಡಿ: ಜಿಲ್ಲಾ ಪಂಚಾಯ್ತಿಗೆ ಕುಡಿಯುವ ನೀರಿಗಾಗಿ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಅನಂತು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಅರೆಕುಡಿಗೆ ಶಿವಣ್ಣ, ಪ್ರತಿ ಸಭೆಯಲ್ಲೂ ಚರ್ಚೆ ಮಾಡುತ್ತಿದ್ದೇವೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಜಿಪಂನಲ್ಲಿ ಹಣ ಇದೀಯೋ ಇಲ್ಲವೇ ಎಂಬುದರ  ಬಗ್ಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.
ಟಾಸ್ಕ್‌ಪೋರ್ರ್ಸ್‌ನ ಮೂರ್ನಾಲ್ಕು ಸಭೆಗಳನ್ನು ಈವರೆಗೆ ನಡೆಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದಾಗ, ಹಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಶಿವಣ್ಣ ಮರು ಪ್ರಶ್ನೆ ಮಾಡಿದರು.
ಕಾಮಗಾರಿ ಐಎಂಐಎಸ್ ಡಾಟಾದ ಆನ್‌ಲೈನ್‌ನಲ್ಲಿ ದಾಖಲು ಮಾಡಿದರೆ  ಹಣ ಬಿಡುಗಡೆಯಾಗುತ್ತದೆ. ತೆಗೆದುಕೊಳ್ಳಬೇಕಾದ ಕಾಮಗಾರಿಯ ವಿವರವನ್ನು ಕಾರ್ಯಪಾಲಕ ಅಭಿಯಂತರರಿಗೆ ನೀಡಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.
ಟಾಸ್ಕ್ ಪೋರ್ಸ್‌ಗೆ ಶಾಸಕರು ಅಧ್ಯಕ್ಷರು ಹಾಗಾದರೆ ನಾವು ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅನಂತು ಹೇಳಿದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement