ಪಾಲಿಟೆಕ್ನಿಕ್ ಕೇಂದ್ರ ಈ ವರ್ಷದಿಂದಲೇ ಜಾರಿ
ಕ.ಪ್ರ.ವಾರ್ತೆ ಕಡೂರು ಮಾ.13
ರಾಜ್ಯ ಸರ್ಕಾರದಿಂದ ಕಡೂರು ಪಟ್ಟಣಕ್ಕೆ ಪಾಲಿಟೆಕ್ನಿಕ್ ಕೇಂದ್ರ ಮಂಜೂರಾಗಿದ್ದು ಈ ಶೈಕ್ಷಣಿಕ ವರ್ಷದಿಂದಲೇ ವಿವಿಧ ವಿಭಾಗಗಳ ತರಗತಿಗಳು ಆರಂಭವಾಗಲಿವೆ ಎಂದು ಕಡೂರು ಶಾಸಕ ಡಾ.ವೈ.ಸಿ. ವಿಶ್ವನಾಥ್ ಹೇಳಿದರು.
ಈ ಬಗ್ಗೆ ಪತ್ರಿಕೆಗಳಿಗೆ ಮಾಹಿತಿ ನೀಡಿದ ಅವರು, ಕಡೂರು ವಿಧಾನಸಭಾ ಕ್ಷೇತ್ರದ ಜನರ ಬಹುದಿನದ ಬೇಡಿಕೆಯಾಗಿದ್ದ ಪಾಲಿಟೆಕ್ನಿಕ್ ಕೇಂದ್ರ ತರುವ ಪ್ರಯತ್ನಕ್ಕೆ ಇದೀಗ ಫಲ ದೊರೆತಿದೆ. ಆ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕಡೂರು ಪಟ್ಣಣಕ್ಕೆ ಪಾಲಿಟೆಕ್ನಿಕ್ ಕೇಂದ್ರವನ್ನು ಮಂಜೂರು ಮಾಡಿದೆ. 2013-14ನೇ ಸಾಲಿನ ಈ ಶೈಕ್ಷಣಿಕ ವರ್ಷದಿಂದಲೇ ಕೇಂದ್ರ ಆರಂಭವಾಗುವ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು.
ಇದರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ, ಸಿವಿಲ್ ಎಂಜಿನಿಯರಿಂಗ್ ವಿಭಾಗ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳ ತರಗತಿಗಳು ಆರಂಭವಾಗಲಿವೆ. ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ದೂರದ ಊರುಗಳಿಗೆ ತೆರಳಿ ಮತ್ತು ಖಾಸಗಿ ಪಾಲಿಟೆಕ್ನಿಕ್ಗಳಲ್ಲಿ ಹೆಚ್ಚು ಹಣನೀಡಿ ವ್ಯಾಸಂಗ ಮಾಡುತ್ತಿದ್ದ ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಕೇಂದ್ರದ ಆರಂಭದಿಂದ ಅನುಕೂಲವಾಗಲಿದೆ.
ಅಗತ್ಯ ಸಿಬ್ಬಂದಿ: ಸರ್ಕಾರ ಪಾಲಿಟೆಕ್ನಿಕ್ ಕೇಂದ್ರದ ಜೊತೆಗೆ ಅಗತ್ಯ ಭೋಧಕ ಮತ್ತು ಭೋದಕೇತರ ಸಿಬ್ಬಂದಿಯನ್ನು ಕೂಡ ಮಂಜೂರು ಮಾಡಿದೆ. ಸದ್ಯಕ್ಕೆ ಈ ಕೇಂದ್ರ ಕಡೂರು ಪಟ್ಟಣದ ಖಾಸಗಿ ಕಟ್ಟಡದಲ್ಲಿ ಆರಂಭಗೊಳ್ಳಲಿದೆ. ಸರ್ಕಾರಿ ಕಟ್ಟಡಕ್ಕೆ ಸುಸಜ್ಜಿತ ನಿವೇಶನ ನೋಡಲಾಗುತ್ತಿದ್ದು ಕಟ್ಟಡವನ್ನೂ ಸರ್ಕಾರ ಮಂಜೂರು ಮಾಡಲಿದೆ ಎಂದು ಹೇಳಿದರು.
ನಿರಂತರ ಬರಗಾಲದಿಂದ ಕುಡಿವ ನೀರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಿಗೆ ತೊಂದರೆ ಉಂಟಾಗಿರುವ ಕಡೆ ಅಗತ್ಯ ಕುಡಿವ ನೀರು ಒದಗಿಸುವ ಹಿನ್ನೆಲೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಸಭೆಯಲ್ಲಿ ಕುಡಿಯುವ ನೀರಿಗಾಗಿ ರು. 60 ಲಕ್ಷದ ಕ್ರೀಯಾಶೀಲ ಯೋಜನೆ ತಯಾರಿಸಲಾಗಿದ್ದು ಶೀಘ್ರ ಈ ಅನುದಾನ ಮಂಜೂರಾಗಲಿದೆ. ಬೀರೂರು ಪಟ್ಟಣದ ಕುಡಿಯುವ ನೀರಿಗಾಗಿ ರು. 10 ಲಕ್ಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಡಲಾಗಿದೆ. ಕ್ಷೇತ್ರದಲ್ಲಿ ನೀರಿಗೆ ತೊಂದರೆ ಉಂಟಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.