ಬತ್ತ ಖರೀದಿ ಕೇಂದ್ರ ಪ್ರಾರಂಭ
ಕ.ಪ್ರ.ವಾರ್ತೆ, ಕೊಪ್ಪ, ಮಾ. 13
2012-13 ನೇ ಸಾಲಿನ ಸರ್ಕಾರ ಬೆಂಬಲ ಬೆಲೆ ಯೋಜನೆಯ ಬತ್ತ ಖರೀದಿ ಕೇಂದ್ರ ಪಟ್ಟಣದ ವಿದ್ಯಾನಗರದ ಸಮುದಾಯ ಭವನದಲ್ಲಿ ಮಾ.11 ರಿಂದ ಪ್ರಾರಂಭವಾಗಿದೆ.
ಉತ್ತಮ ಗುಣಮಟ್ಟದ ಬತ್ತಕ್ಕೆ ಕ್ವಿಂಟಲ್ಗೆ ರು. 1,500 ನಿಗದಿ ಮಾಡಿದ್ದು, ಎಕರೆಗೆ 12 ಕ್ವಿಂಟಲ್ ಬತ್ತ ಖರೀದಿ ಮಾಡಲಾಗುತ್ತಿದ್ದು, ಬತ್ತ ಮಾರಲು ಇಚ್ಚಿಸುವ ರೈತರು ಮೊದಲಿಗೆ ಬತ್ತದ ಗುಣ ಮಟ್ಟದ ಪರೀಶೀಲನೆಗಾಗಿ ಬೆಳಗ್ಗೆ 10ರಿಂದ 4-30 ರ ಒಳಗೆ ಕೃಷಿಭೂಮಿಯ ಪಣಿಯ ಜೊತೆಗೆ ಬತ್ತ ಸ್ಯಾಂಪಲನ್ನು ಅಧಿಕಾರಿಗಳಿಗೆ ನೀಡಿ ಪರೀಶೀಲನೆಯ ನಂತರ ಅಧಿಕಾರಿಗಳು ನಿಗದಿಪಡಿಸಿದ ದಿನಾಂಕದಂದು ರೈತರು ತಮ್ಮ ಬತ್ತವನ್ನು ಖರೀದಿ ಕೇಂದ್ರಕ್ಕೆ ತಂದು ಮಾರಬಹುದಾಗಿದೆ. ಬತ್ತ ಖರೀದಿ ಕೇಂದ್ರ ಪ್ರಾರಂಭವಾದ ಮೂರನೇ ದಿನವಾದ ಬುಧವಾರ ಅಧಿಕಾರಿಗಳು 11-30 ಗಂಟೆಯಾದರೂ ಖರೀದಿ ಬಾಗಿಲನ್ನು ತೆಗೆಯದೇ ಇದ್ದುದರಿಂದ ರೈತರು ಕಾಯುವ ಪರಿಸ್ಥಿತಿ ಎದುರಾಗಿತ್ತು. ನಂತರ ಬಂದ ಅಧಿಕಾರಿಗಳೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು.