ರಸ್ತೆ ದುರಸ್ತಿಗೆ ಆಗ್ರಹ
ಕ.ಪ್ರ.ವಾರ್ತೆ ಕೊಪ್ಪ ಮಾ.13
ತಾಲೂಕಿನ ಹೆಬ್ರುಗುಂಡಿಯ ಮರಳು ಕ್ವಾರೆಯಿಂದ ಮರಳು ಸಾಗಾಣೆ ಮಾಡುವ ಲಾರಿಗಳನ್ನು ವಗಳೆ, ಚಂಡಗುಡ್ಡೆ, ತಮ್ಮಡವಳ್ಳಿ ಗ್ರಾಮಸ್ಥರು ಬುಧವಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಈ ಭಾಗದ ಪರಿಶಿಷ್ಟ ಕಾಲೋನಿಯಲ್ಲಿ ಹಾದು ಹೋಗುವ ಎನ್.ಎಚ್.ಪಿ. ಮತ್ತು ವಗಳೆ ನಡುವಿನ 3 ಕಿ.ಮೀ ಡಾಂಬರು ರಸ್ತೆ ಮರಳು ಸಾಗಾಟದ ಲಾರಿಗಳ ಓಡಾಟದಿಂದ ತೀವ್ರ ಹದಗೆಟ್ಟಿದ್ದು, ದುರಸ್ತಿ ಮಾಡದೆ ಇರುವುದನ್ನು ವಿರೋಧಿಸಿ ಮರಳು ಸಾಗಾಣೆಗೆ ಬಂದಿದ್ದ 25ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಪ್ರತಿಭಟಿಸಿದರು.
ರಸ್ತೆ ದುರಸ್ತಿ ಇಲ್ಲ: ಹೆಬ್ರುಗುಡಿ ಮರಳುಕ್ವಾರೆ 2.5 ಎಕರೆ ವಿಸ್ತಾರವಾಗಿದ್ದು, ವಾರ್ಷಿಕ ಒಂದು ಸಾವಿರಕ್ಕೂ ಅಧಿಕ ಲಾರಿಲೋಡ್ ಮರಳು ಸಾಗಾಣೆಯಾಗುತಿದ್ದರೂ, ಸರ್ಕಾರ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.
ಮರಳು ಕ್ವಾರೆಯನ್ನು ಬುಧವಾರ ಆರಂಭಿಸುವುದಾಗಿ ಲೋಕೋಪಯೋಗಿ ಇಲಾಖೆ ಸೂಚನೆ ಮೇರೆಗೆ ಮುಂಜಾನೆ 6 ಗಂಟೆಯಿಂದಲೇ ಮರಳು ಸಾಗಾಟ ಆರಂಭವಾಯಿತು. 11 ಗಂಟೆಗೆ ವೇಳೆಗೆ ಗ್ರಾಮಸ್ಥರು ಲಾರಿ ತಡೆದು ಪ್ರತಿಭಟಿಸುತ್ತಿರುವ ವಿಚಾರ ತಿಳಿದು, ಇಲಾಖಾ ಅಧಿಕಾರಿಗಳು, ಡಿವೈಎಸ್‌ಪಿ ಜಗದೀಶ್, ವೃತ್ತಪೊಲೀಸ್ ಅಧಿಕಾರಿ ಎಸ್.ಎಸ್. ಪಾಟೀಲ್, ಹರಿಹರಪುರ ಠಾಣಾಧಿಕಾರಿ ಚಂದ್ರಶೇಖರ್ ಸ್ಥಳಕ್ಕೆ ಆಗಮಿಸಿದರು.
ರಾಯಲ್ಟಿ ನೀಡಬೇಕು: ಗ್ರಾಮಸ್ಥರಿಗೆ ಮರಳು ನೀಡಬೇಕು, ಗ್ರಾಪಂಗೆ ರಾಯಲ್ಟಿಯಲ್ಲಿ ಭಾಗ ನೀಡಬೇಕು ಹಾಗೂ ರಸ್ತೆ ದುರಸ್ತಿ ಕೈಗೊಳ್ಳುವ ಬಗ್ಗೆ ಚುನಾಯಿತ ಪ್ರತಿನಿಧಿಗಳು ಭರವಸೆ ನೀಡುವವರೆಗೆ ಮರಳು ಸಾಗಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು. ಗುರುವಾರ ಚುನಾಯಿತ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿ ಗ್ರಾಮಸ್ಥರು ಅಹವಾಲುಗಳಿಗೆ ಉತ್ತರ ಕೊಡಿಸುವ ಭರವಸೆ ದೊರೆತ ನಂತರ ಪ್ರತಿಭಟನೆ ಕೈಬಿಡಲಾಯಿತು.
ಅಸಗೋಡು ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಹೂವಯ್ಯ, ದಲಿತ ಮುಖಂಡ ಬೆಳಗೊಳ ಆನಂದ್, ವಾಸು, ಮಂಜು, ಸುರೇಶ್, ಸಣ್ಣಯ್ಯ, ಸುಬ್ಬಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.