ರಸ್ತೆ ಸರಿಪಡಿಸದಿದ್ದರೆ ಮತ ಬಹಿಷ್ಕಾರ
ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.13
ಪರಿಶಿಷ್ಟರ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸುವ ಜೊತೆಗೆ ಅಂಬೇಡ್ಕರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಬದಲು ಬೇರೆ ಹೆಸರಿಡಲು ತಯಾರಿ ನಡೆಸಿರುವುದನ್ನು ವಿರೋಧಿಸಿ ಮುಂಬರುವ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕಳಸ ಪಟ್ಟಣದ ಅಂಬೇಡ್ಕರ್ ನಗರ (ಶಿವನಗರ) ಬಡಾವಣೆ ನಿವಾಸಿಗಳಾದ ಕೆ.ಎಲ್.ಶಿವು, ಚಂದ್ರು, ಸುರೇಶ್, ಅಣ್ಣಪ್ಪ, ಗೋಪಾಲ್, ಲೋಕೇಶ್ ಮೊದಲಾದವರು ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಕಳಸ ಪಟ್ಟಣದ ರೈಸ್ಮಿಲ್ ಸಮೀಪ ಶಿವನಗರ ಬಡಾವಣೆ ಇದೆ. ಇಲ್ಲಿನ ರಸ್ತೆ ಕಳೆದ ಹಲವು ವರ್ಷದಲ್ಲಿ ಒಮ್ಮೆಯೂ ದುರಸ್ತಿ ಕಂಡಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದಿದ್ದಾರೆ.
ಅನುದಾನ ಮಂಜೂರು: ಆದರೆ ಇತ್ತೀಚಿಗೆ ಮೂಡಿಗೆರೆ ತಾಪಂ ನಿಂದ ಈ ರಸ್ತೆಯ ಅಭಿವೃದ್ಧಿಗೆ ಲಕ್ಷಾಂತರ ರು. ಅನುದಾನ ಮಂಜೂರಾಗಿದೆ. ಬಡಾವಣೆ ಎದುರಿನ ವಿಎಸ್ಎಸ್ಎನ್ ಸೊಸೈಟಿ ಆಡಳಿತ ಈ ರಸ್ತೆ ಸಂಚಾರಿಗಳಿಗೆ ವೃಥಾ ಕಿರುಕುಳ ನೀಡುತ್ತಿದ್ದಾರೆ. ನಿಯಮಗಳನ್ವಯ ಪ.ಜಾತಿ ಕಾಲನಿಯಿಂದ ಕಾಮಗಾರಿ ಆರಂಭಿಸಬೇಕಾಗಿದ್ದ ರಸ್ತೆಯನ್ನು ಮುಖ್ಯರಸ್ತೆಯಿಂದ ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಮಸ್ಯೆ ಕುರಿತು ಶಾಸಕರು, ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ಕೂಡಲೇ ರಸ್ತೆ ಕಾಮಗಾರಿಯಿಂದ ಸ್ಥಳೀಯರಿಗಾಗುತ್ತಿರುವ ವಂಚನೆ ತಪ್ಪಿಸಿ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ನಾಮಕಾರಣ ಮಾಡದಿದ್ದರೆ. ಮುಂಬರು ಚುನಾವಣೆಯನ್ನು ಬಹಿಷ್ಕರಿಸುವುದಲ್ಲದೇ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.