ಉದ್ಯಾನವನ ಜಾಗ ಒತ್ತುವರಿ: ಪ್ರತಿಭಟನೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 14
ಉದ್ಯಾನವನಕ್ಕೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಉಪ್ಪಳ್ಳಿ ಗ್ರಾಮದ ಸರ್ವೇ ನಂ. 130 ರಲ್ಲಿ ಪಾರ್ಕ್ಗೆ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಯೋರ್ವರು 4 ಸಾವಿರ ಚದರಡಿಗಳಷ್ಟು ಒತ್ತುವರಿ ಮಾಡಿದ್ದಾರೆಂದು ದಾಖಲೆ ಸಮೇತ ಪ್ರತಿಭಟಿಸಿದ ಗ್ರಾಮಸ್ಥರು ಕೂಡಲೆ ಸಾರ್ವಜನಿಕರಿಗೆ ಸೇರಿದ ಜಾಗವನ್ನು ತೆರವುಗೊಳಿಸಿ ಬೇಲಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಪ್ರತಿಭಟನಾಕಾರರ ಮನವಿಗೆ ಓಗೊಟ್ಟು ನಗರಸಭೆ ಮತ್ತು ಸಿಡಿಎ ಅಧಿಕಾರಿಗಳು ತಾಲೂಕು ಸರ್ವೇಯರ್ರೊಂದಿಗೆ ಸ್ಥಳಕಾಮಿಸಿದರು. ನಂತರ ಸಮಸ್ಯೆ ಆಲಿಸಿ ಜಾಗವನ್ನು ಅಳತೆ ಮಾಡಿದಾಗ ಉದ್ಯಾನವನದ ಜಾಗ ಒತ್ತುವರಿ ಮಾಡಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡುತ್ತಿದ್ದುದು ದೃಢಪಟ್ಟಿತು.
2 ಬಾರಿ ನೋಟಿಸ್ ಜಾರಿ: ಕಂದಾಯಾಧಿಕಾರಿ ಬಸವರಾಜ್ ಮಾತನಾಡಿ, ಪಾರ್ಕ್ ಜಾಗ ಒತ್ತುವರಿ ಕುರಿತಂತೆ ಪಕ್ಕದ ಮಾಲೀಕ ಉಸ್ಮಾನ್ ಖಾನ್ಗೆ 2 ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು, ಇಂದು ಸಹ ಸ್ಥಳಕ್ಕೆ ಬರುವಂತೆ ಸೂಚಿಸಲಾಗಿದ್ದರೂ ಮಾಲಿಕರು ಬಾರದೆ ಇದ್ದ ಕಾರಣ ಎರಡು ಜಾಗವನ್ನು ಅಳತೆ ಮಾಡಿ ಗುರುತು ಪಡಿಸಲಾಗಿದೆ. ಪಾರ್ಕ್ಗೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ಗ್ಯಾರೇಜ್ ನಿರ್ಮಾಣ ಮಾಡಿದ್ದು ಸಧ್ಯದಲ್ಲೆ ಅದನ್ನು ತೆರವುಗೊಳಿಸಿ ಬೇಲಿ ಹಾಕುವ ಜೊತೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ 30 ಅಡಿ ರಸ್ತೆಯನ್ನು ಸಾರ್ವಜನಿಕರಿಗೆ ಬಿಡಿಸಲಾಗುವುದೆಂದರು.
ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ, ಪಾರ್ಕ್ಗೆ ಸೇರಿದ 4 ಸಾವಿರ ಚದರಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಈ ಹಿಂದೆ ಗ್ಯಾರೇಜ್ ನಡೆಯುತ್ತಿದ್ದಾಗಲೆ ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದ್ದರೂ ಗಮನ ಹರಿಸಲಿಲ್ಲ. ಈಗ ಸಾರ್ವಜನಿಕರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗೋಡೆಗಳ ಬಳಿ ಪೆಟ್ರೋಲ್ ಬಂಕ್ ನಿರ್ಮಿಸಲು ಹೊರಟಿದ್ದಾರೆ ಎಂದು ದೂರಿದರು.
ನಗರ ಯೋಜನಾಧಿಕಾರಿ ಅಣ್ಣಪ್ಪ, ತಾಲೂಕು ಸರ್ವೇಯರ್ ತಿಪ್ಪೇಸ್ವಾಮಿ, ಸ್ಥಳೀಯರಾದ ಬಷೀರ್ ಖಾನ್, ಸತೀಶ್, ರೇವಣ್ಣ, ಬದ್ರುದೀನ್ ಸೇರಿದಂತೆ ಹಲವರು ಹಾಜರಿದ್ದರು.