ತಂಗಿಯ ಪ್ರೇಮಕ್ಕೆ ಅಣ್ಣನ ಅಡ್ಡಿ: ಘರ್ಷಣೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.14
ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದ ಸಂದರ್ಭದಲ್ಲಿ ಯುವತಿ ಕಾಲುವೆಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿರುವ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಈ ಘಟನೆ ನಡೆದು 24 ಗಂಟೆ ಕಳೆದರೂ ಸಹ ಇಬ್ಬರು ಪತ್ತೆಯಾಗಿಲ್ಲ.
ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ನೇತ್ರಾವತಿ ಹಾಗೂ ಜಗದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ಸಂಜೆ ನೇತ್ರಾವತಿ ಹಾಗೂ ಜಗದೀಶ್ ತರೀಕೆರೆಗೆ ಬಂದಿದ್ದು, ಆಗ, ಜಗದೀಶ್ ಅವರು, ನೇತ್ರಾವತಿಯ ಅಣ್ಣ ದೇವೇಂದ್ರನನ್ನು ತರೀಕೆರೆಗೆ ಕರೆಸಿಕೊಂಡಿದ್ದಾರೆ.
ನಾಲೆಗೆ ಬಿದ್ದ ಯುವತಿ: ಬಳಿಕ ಮೂವರು ತಮ್ಮ ಊರಿಗೆ ತಡರಾತ್ರಿ ತೆರಳುವ ವೇಳೆ ಭದ್ರಾ ಕಾಲುವೆಯ ಬಳಿ ಜಗದೀಶ್ ಮತ್ತು ದೇವೇಂದ್ರನ ನಡುವೆ ಜಗಳ ನಡೆದಿದೆ. ಆಗ, ಪರಸ್ಪರ ತಳ್ಳಾಟದಲ್ಲಿ ಕಾಲುವೆಗೆ ಬಿದ್ದ ನೇತ್ರಾವತಿ ಬಳಿಕ ಈಜಿ ದಡ ಸೇರಿದ್ದಾರೆ. ಆದರೆ, ಜಗದೀಶ್ ಮತ್ತು ದೇವೇಂದ್ರ ಎಲ್ಲಿಗೆ ಹೋದರೆಂದು ಪತ್ತೆಯಾಗಿಲ್ಲ.
ನೇತ್ರಾವತಿ ಈ ವಿಷಯವನ್ನು ಮನೆಗೆ ತಿಳಿಸಿದ್ದು, ಗುರುವಾರ ಬೆಳಿಗ್ಗೆ ಭದ್ರಾ ಕಾಲುವೆಯಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಯಾವುದೇ ಸುಳಿವು ಸಿಗಲಿಲ್ಲ. ಈ ಸಂಬಂಧ ಜಗದೀಶ್ ಅವರ ತಂದೆ ಗೋವಿಂದಪ್ಪ ಅವರು ಲಕ್ಕವಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.