ಧೈರ್ಯವಿದ್ದರೆ ಗೋರಖ್ ಸಿಂಗ್ ವರದಿ ತಿರಸ್ಕರಿಸಿ
ಕ.ಪ್ರ ವಾರ್ತೆ, ಶೃಂಗೇರಿ, ಮಾ.14
ಗೋರಖ್ ಸಿಂಗ್ ವರದಿ ಜಾರಿಯಲ್ಲಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ರೈತರ ಮೇಲೆ ಮೊಕದ್ದಮೆ ದಾಖಲಿಸಿ ಬಲವಂತದ ಸಾಲ ವಸೂಲಿ ನಡೆಸುತ್ತಿದೆ.
ಧೈರ್ಯವಿದ್ದರೆ ಗೋರಕ್ ಸಿಂಗ್ ವರದಿ ಸಂಪೂರ್ಣವಾಗಿ ತಿರಸ್ಕರಿಸಿ ಬಲವಂತದ ಸಾಲ ವಸೂಲಿಗೆ ಮುಂದಾಗಲಿ ಆಗ ತಕ್ಕ ಉತ್ತರ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಬ್ಯಾಂಕುಗಳಿಗೆ ಸವಾಲು ಹಾಕಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕುಂಚೇಬೈಲಿನಲ್ಲಿ ಕೊಪ್ಪದ ಸಿಂಡಿಕೇಟ್‌ಬ್ಯಾಂಕ್ ನವರು ರೈತ ಮುಖಂಡರೊಬ್ಬರ ಮನೆಗೆ ನುಗ್ಗಿ ಬಲವಂತವಾಗಿ ಅವರನ್ನು ಪೊಲೀಸ್ ಸಹಾಯದಿಂದ ಬಂಧಿಸಲು ಪ್ರಯತ್ನಿಸಿ ಅವರನ್ನು ಓಡಿಸಿರುವ ಕೃತ್ಯವನ್ನು ಖಂಡಿಸಿದರು.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೇಡಿನ ಸಂಗತಿ. ಪೊಲೀಸರು ಮಾನವೀಯತೆಯಿಂದ ವರ್ತಿಸಲಿ ಎಂದು ಎಚ್ಚರಿಸಿದರು.
ಗೋರಖ್ ಸಿಂಗ್ ವರದಿಯಲ್ಲಿಯೇ ತಿಳಿಸಿದಂತೆ ಹಳದಿ ಎಲೆ ರೋಗ, ಬೆಲೆ ಕುಸಿತ, ಆರ್ಥಿಕ ಸಂಕಷ್ಟದಿಂದ ರೈತರ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳು ಇಂತಹ ಬಲವಂತದ ಕ್ರಮಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬ್ಯಾಂಕುಗಳೇ ಹೊಣೆಯಾಗುತ್ತದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಜಿ.ಜಿ. ಮಂಜುನಾಥ್, ರಮೇಶ್, ವಿವೇಕನಂದ ಮತ್ತಿತರರು ಉಪಸ್ಥಿತರಿದ್ದರು.