ನಾಳೆಯಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.14
ಮಾ. 16ನೇ ಶನಿವಾರ ಹಾಗೂ 17ರ ಭಾನುವಾರ ಪಟ್ಟಣದ ವಾಟರ್ ಟ್ಯಾಂಕ್ ಸಮೀಪದ ನೂತನ ರಂಗಮಂದಿರದಲ್ಲಿ ನಡೆಯುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ತಿಳಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅತ್ತಿಮಬ್ಬೆ ಪ್ರಶಸ್ತಿ ವಿಜೇತೆ, ಸಾಹಿತಿ ಎಂ. ಜಯಮ್ಮ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮಾ.16ರ ಶನಿವಾರ ಹಾಗೂ ಭಾನುವಾರ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಲಿದೆ. ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ದೀಪ್ತಿ ಪ್ರೌಢಶಾಲೆಯಿಂದ ಪ್ರಾರಂಭವಾಗಿ ಪ್ರವಾಸಿ ಮಂದಿರದವರೆಗೆ ನಡೆಯಲಿದೆ. ಹಾವೇರಿಯಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆಗಾಗಿ ವಿಶೇಷ ರಥ ಬರಲಿದೆ. ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿಯ ಸ್ತಬ್ಧ ಚಿತ್ರ, ವೀರಗಾಸೆ, ಗೊಂಬೆ ಕುಣಿತ, ಶಾಲಾ ಮಕ್ಕಳ ಬ್ಯಾಂಡ್ಸೆಟ್ ಮುಂತಾದ ಕಲಾತಂಡಗಳು ಭಾಗವಹಿಸಲಿವೆ ಎಂದರು.
ಕಲ್ಕೂರ ಆಶಯ ನುಡಿ: ಬೆಳಿಗ್ಗೆ 10.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲೆಯ ಕಸಾಪ ಜಿಲ್ಲಾಧ್ಯಾಕ್ಷ ಪ್ರದೀಪ್ಕುಮರ್ ಕಲ್ಕೂರ ಆಶಯ ನುಡಿ ನುಡಿಯಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮ ಸಮ್ಮೇಳನದ ಭಾಷಣ ಮಾಡಲಿದ್ದಾರೆ.
ಶನಿವಾರ 3 ಗಂಟೆಗೆ ನಮ್ಮ ಪ್ರೀತಿಯ ಮಲೆನಾಡು ಎಂಬ ಗೋಷ್ಠಿ ನಡೆಯಲಿದೆ. ಕಿರುತೆರೆ ನಿರ್ದೇಶಕ ರಮೇಶ್ ಬೇಗಾರ್ ಉಪನ್ಯಾಸ ನೀಡಲಿದ್ದಾರೆ. ಪತ್ರಕರ್ತ ಹೊಸಕೊಪ್ಪ ಪ್ರಭಾಕರ ಕಾರಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5 ಗಂಟೆಗೆ ನರಸಿಂಹರಾಜಪುರ ತಾಲೂಕು ದರ್ಶನ ಎಂಬ 2ನೇ ಗೋಷ್ಠಿಯಲ್ಲಿ ಚೌಳಹಿರಿಯೂರು ರೇಖಾ ನಾಗರಾಜರಾವ್ ಉಪನ್ಯಾಸ ನೀಡಲಿದ್ದಾರೆ.
ಸಾಹಿತಿ ಜ್ವಾಲನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಅಂಟಿಗೆ ಪಿಂಟಿಗೆ ಹಾಗೂ ಬೆಂಗಳೂರಿನ ಡಾ. ಶಮಿತಾ ಮಲ್ನಾಡ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಜಾನಪದ ಗೋಷ್ಠಿ: ಭಾನುವಾರ ಬೆಳಿಗ್ಗೆ 9ರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. 10 ಗಂಟೆಗೆ ಜಾನಪದ ಗೋಷ್ಠಿ ನಡೆಯಲಿದೆ. ಬೆಂಗಳೂರಿನ ಡಾ. ಸಂಧ್ಯಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಉಪನ್ಯಾಸಕ ಜೀರುಳ್ಳಿ ನಾಗೇಶ್ ತಾಲೂಕಿನ ಜಾನಪದ ಕಲೆಗಳು ಎಂಬ ವಿಷಯದ ಬಗ್ಗೆ ಹಾಗೂ ಎ. ಬುಜಂಗಾಚಾರ್ ತಾಲೂಕಿನ ಜಾನಪದ ವೈಭವ ಎಂಬ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
12 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಕಸಾಪ ಪೂರ್ವಾಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. 17 ಕವಿಗಳು ತಮ್ಮ ಕವಿತೆ ವಾಚನ ಮಾಡಲಿದ್ದಾರೆ. 2.30ಕ್ಕೆ ಕವಿ ರತ್ನಾಕರವರ್ಣಿ ಸಂಸ್ಮರಣೆ ಎಂಬ 4ನೇ ಗೋಷ್ಠಿ ನಡೆಯಲಿದೆ. 3.30ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದ 12 ಸಾಧಕರನ್ನು ಸಚಿವ ಡಿ.ಎನ್. ಜೀವರಾಜ್ ಸನ್ಮಾನಿಸಿ ಮಲೆನಾಡ ಸಿರಿ ಎಂಬ ಸನ್ಮಾನ ಪತ್ರ ನೀಡಲಿದ್ದಾರೆ.
ಅಂಬಾತನಯ ಸಮಾರೋಪ ಭಾಷಣ: ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮ ಉಪಸ್ಥಿತಿಯಲ್ಲಿ ಉಡುಪಿಯ ಸಾಹಿತಿ ಅಂಬಾತನಯ ಮುದ್ರಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್, ತಾ.ಕ.ಸ.ಪ ಪ್ರಧಾನ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ, ಕ.ಸಾ.ಪ ಕಸಬಾ ಹೋಬಳಿ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ, ಕಾರ್ಯದರ್ಶಿ ಜುಬೇದ ಉಪಸ್ಥಿತರಿದ್ದರು.