ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೌಲ್ಯಗಳೇ ಧರ್ಮದ ಮೂಲ ತಿರುಳು

Lingaraj Badiger
Updated On : 15 Mar 2013, 10:25 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.14  
ದಯೆ, ಪ್ರೀತಿ, ಬಾಂಧವ್ಯಗಳಂತಹ ಮೌಲ್ಯಗಳೇ ಧರ್ಮದ ಮೂಲ ತಿರುಳಾಗಿದೆ. ನಗರೀಕರಣಗೊಳ್ಳುತ್ತಿರುವ  ಮಾನವೀಯ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದರಿಂದ ಧರ್ಮದ ವ್ಯಾಖ್ಯೆಯೇ ವಿರೂಪಗೊಳ್ಳುತ್ತಿದೆ ಎಂದು ನಾಟಕಕಾರ, ಸಾಹಿತಿ ಬಿ. ಚಂದ್ರೇಗೌಡ ಹೇಳಿದ್ದಾರೆ.
ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಯೆಯೇ ಧರ್ಮದ ಮೂಲ, ಕಾಯಕವೇ ಕೈಲಾಸ ಎಂಬ ಆದರ್ಶಪ್ರಾಯ ಸಿದ್ಧಾಂತವನ್ನು ಸಮಾಜಕ್ಕೆ ಅರ್ಪಿಸಿದ ಬಸವಣ್ಣ 12ನೇ ಶತಮಾನದಲ್ಲಿ ಧರ್ಮಾಚರಣೆ ಮತ್ತು ರಾಜಕೀಯ ಆಡಳಿತವನ್ನು ಏಕಕಾಲದಲ್ಲಿ  ನಿಭಾಯಿಸಿ, ಆದರ್ಶ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದರು.
ಶೋಷಿತ ಸಮಾಜದ ಪರವಾಗಿ ಧ್ವನಿ ಎತ್ತಿ ಅಸ್ಪೃಶ್ಯತೆ, ಸಮಾನತೆ, ಜಾತೀಯತೆ ವಿರುದ್ಧ ಮಾತಿನಲ್ಲಿ ಹೇಳದೆ  ಆಚರಣೆಯಲ್ಲಿ ಜಾರಿಗೆ ತಂದು ಸಾಮಾಜಿಕ ಹೋರಾಟ ನಡೆಸಿದ ಬಸವಣ್ಣ ಅವರ ಮಾರ್ಗದರ್ಶನ ಪ್ರಸ್ತುತ ಸಮಾಜದಲ್ಲಿ ಉಲ್ಬಣಿಸುತ್ತಿರುವ ತಲ್ಲಣಗಳಿಗೆ ದಿವ್ಯೌಷಧಿಯಾಗಲಿದೆ ಎಂದು ಹೇಳಿದರು.
ಸೊಗಡಿಂದ ಸಂಸ್ಕೃತಿ: ಕಾಯಕವೇ ಕೈಲಾಸ ಎಂಬ ಅವರ ಧ್ಯೇಯ ವಾಕ್ಯ ಸಾರ್ಥಕತೆ ಪಡೆದುಕೊಳ್ಳಬೇಕಾದರೆ ಗ್ರಾಮಗಳನ್ನೊಳಗೊಂಡ ಭಾರತದಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡಿಂದ ಮಾತ್ರವೇ ಮಾನವೀಯ ಧರ್ಮ ರಕ್ಷಣೆ  ಮತ್ತು ಮಾನವೀಯ ಮೌಲ್ಯಗಳು ಜೀವಂತವಾಗಿರಲು ಸಾಧ್ಯ ಎಂದು ತಿಳಿಸಿದರು.   
ಧರ್ಮ ಮತ್ತು ರಾಜಕೀಯ ತಲ್ಲಣಗಳು ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದ ಸಾಹಿತಿ ಚಟ್ನಳ್ಳಿ ಮಹೇಶ್, ಕೆಡುಕನ್ನು ಮಾಡುವುದು ಆದರ್ಶ. ಒಳ್ಳೆಯದನ್ನು ಮಾಡುವುದೇ ಧರ್ಮವಾಗಿದೆ. ಧರ್ಮದೊಳಗೆ ಆದರ್ಶ ತಾಂಡವವಾಡುವ ಮೂಲಕ ಸಮಾಜದಲ್ಲಿ ರಾಜಕೀಯ ತಲ್ಲಣಗಳು ಉಂಟಾಗುತ್ತಿವೆ.  
ಪ್ರತಿಯೊಬ್ಬ ಮನುಷ್ಯರಲ್ಲಿ ಸಾಕ್ಷಿ ಪ್ರಜ್ಞೆ ಜಾಗೃತಗೊಂಡು ಕೆಡುಕಿನಿಂದ ಸನ್ನಡತೆಯೆಡೆಗೆ ಹೆಜ್ಜೆ ಹಾಕಿದಾಗ ತಲ್ಲಣಗಳು ತಡೆಯಲು ಸಾಧ್ಯ ಎಂದರು.  
ವಿಚಾರದ ಮೇಲೆ ಅಭಿಪ್ರಾಯ ಮಂಡಿಸಿದ ಪ್ರಗತಿಪರ ಚಿಂತಕ ಬಿ. ಅಮ್ಜದ್ ಮಾತನಾಡಿ, ನೊಂದವರ ಕಣ್ಣೀರು ಒರೆಸಿ ಹಸಿದವರಿಗೆ ಊಟ ಬಡಿಸಿ, ಪ್ರೀತಿ ಪಸರಿಸುವುದೇ ನಿಜವಾದ ಧರ್ಮವಾಗಿದೆ. ಈ ನೆಲೆಯಲ್ಲಿಯೇ ಭಾರತ ವಿಶ್ವದ ದೊಡ್ಡ, ಯಶಸ್ವಿ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂದು ನಮಗೆ  ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಸರಿಯಾದ ರೀತಿಯಲ್ಲಿ ಚಲಾಯಿಸಿದಾಗ ರಾಜಕೀಯ ತಲ್ಲಣಗಳು ತಡೆಯಲು ಸಾಧ್ಯವಿದೆ. ಧರ್ಮ, ಜಾತಿ, ಮತಗಳ ಹಿತಕ್ಕಿಂತ ರಾಷ್ಟ್ರೀಯ ಹಿತ ಮುಖ್ಯವಾದಾಗ  ದೇಶ ಮತ್ತು ದೇಶದ ವ್ಯವಸ್ಥೆ ಸುಭದ್ರಗೊಳ್ಳುತ್ತದೆ. ಮತ ಮಾರಿಕೊಳ್ಳುವ ಸರಕಾಗದೆ ಉತ್ತಮ ನಾಯಕರನ್ನು  ಚುನಾಯಿಸುವ ಪರಿಣಾಮಕಾರಿ ಅಸ್ತ್ರವಾದಾಗ ಶುದ್ಧ ಮತ್ತು ಜನಪರ ರಾಜಕೀಯ ಆಡಳಿತ ಪಡೆದುಕೊಳ್ಳಲು ಸಾಧ್ಯ ಎಂದರು.
ವಿಶಾಲ ತಳಹದಿ: ಸಾಹಿತಿ ಕುಂದೂರು ಅಶೋಕ್ ಮಾತನಾಡಿ, ಮನುಷ್ಯ ಯಾವ ಧರ್ಮಕ್ಕೆ ಸೇರಿದವನು ಎಂಬುದು  ಮುಖ್ಯವಲ್ಲ. ಮನುಷ್ಯ ಮನುಷ್ಯರಲ್ಲಿ ಪ್ರೀತಿಯನ್ನು ಹುಡುಕುವ ಕೆಲಸ ಆಗಬೇಕು. ಧರ್ಮ ಎಂಬುದು ವಿಶಾಲ ತಳಹದಿ ಹೊಂದಿದೆ. ಧರ್ಮದ ಸಾರ ಅರಿಯುವಮುಖೇನ ಕಲುಷಿತಗೊಂಡ ವ್ಯವಸ್ಥೆಯನ್ನು ಸರಿಪಡಿಸುವತ್ತ ಸಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವಮಂದಿರದ ಜಯಬಸವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಧರ್ಮ ಮತ್ತು ರಾಜಕೀಯ ಎರಡು ರೈಲಿನ ಹಳಿಗಳಿದ್ದಂತೆ. ಸಮಾನವಾಗಿ ಮತ್ತು ಸಮಾನಾಂತರವಾಗಿ  ಸಾಗಿದಾಗ ಮಾತ್ರ ರಾಜಧರ್ಮ ಪಾಲನೆಯಾಗುತ್ತದೆ. ಮನುಷ್ಯ ಮನುಷ್ಯತ್ವದೊಂದಿಗೆ ಬದುಕಿದಾಗ ಮಾತ್ರವೇ  ಜೀವನ ತನ್ನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಈ ದಿಸೆಯಲ್ಲಿ ಧರ್ಮದ ಆಶಯಗಳನ್ನು  ಸಾಕಾರಗೊಳಿಸಲು ನಾಗರಿಕ ಸಮಾಜ ಮುಂದಾಗಬೇಕೆಂದರು.   
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಯಾತನಬೀಡು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರವೀಶ್ ಕ್ಯಾತನಬೀಡು,  ಗ್ರಾಮೀಣ ಮಟ್ಟದಲ್ಲಿ ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮದ ಮೂಲಕ ಜನರ ಮನಸ್ಸುಗಳನ್ನು ಬೆಸೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಧಿಕ್ಕಿನಲ್ಲಿ ಜನಜಾಗೃತಿ ಮೂಡಿಸಲು  ಶಿವಸಂಚಾರ ತಂಡದಿಂದ ಮೂರು ದಿನಗಳ ಕಾಲ ನಾಟಕೋತ್ಸವ ನಡೆಸಲಾಗುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿಯವರು ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಯಜಮಾನ್  ಪುಟ್ಟಸ್ವಾಮಪ್ಪ, ವೀರಭದ್ರೇಗೌಡ, ಸೋಮಶೇಖರಪ್ಪ, ಗ್ರಾಪಂ ಸದಸ್ಯರಾದ ನಾಗರಾಜ್, ಕರ್ನಾಟಕ ರಾಜ್ಯ  ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ಜನದನಿ ಸಂಘಟನೆ ಸಂಚಾಲಕ ಮಲ್ಲೇದೇವರಹಳ್ಳಿ ಪ್ರಭು, ಯೋಗಾಚಾರ್ಯ ಬಾಣೂರು ಚೆನ್ನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಕೆ.ಪಿ.  ಬಸವರಾಜ್ ಸ್ವಾಗತಿಸಿ, ಉಪನ್ಯಾಸಕ ಈಶ್ವರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement