ಡಾ. ವಿಷ್ಣುವರ್ಧನ್ ಅಧ್ಯಕ್ಷರಾಗಿ ಆಯ್ಕೆ
ಚಿಕ್ಕಮಗಳೂರು, ಮಾ. 14
ಜಿಲ್ಲಾ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾಗಿ ಎಂ.ಇ.ಎಸ್. ಸಂಸ್ಥೆಯ ಸಹ ಕಾರ್ಯದರ್ಶಿ ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಹೆಚ್. ವಿಷ್ಣುವರ್ಧನ್ ನೇಮಕಗೊಂಡಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡಿ.ಹೆಚ್. ನಟರಾಜ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ತರೀಕೆರೆಯ ಭಗವಾನ್, ಕೊಪ್ಪ ತಾಲೂಕಿನ ಚಕ್ರಪಾಣಿ, ಕಡೂರಿನ ಕೆ.ಎಲ್. ದತ್ತಾತ್ರೇಯ, ಮೂಡಿಗೆರೆ ಅಮ್ಯಾನಾಥ್ ಆಯ್ಕೆಯಾಗಿದ್ದು, ಸಂಘಟನಾ ಕಾರ್ಯದರ್ಶಿಯಾಗಿ ಶೃಂಗೇರಿಯ ಶಶಿಕುಮಾರ್ ಹಾಗೂ ಬ್ರಾಹ್ಮಣ ಯುವ ವೇದಿಕೆಗೆ ಎನ್.ಕೆ. ಅಶ್ವಿನ್ ಅವರನ್ನು ಸಹ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇಂದಿನಿಂದ ನಾಟಕೋತ್ಸವ
ಚಿಕ್ಕಮಗಳೂರು: ಮಿತ್ರ ವೃಂದ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾ.16ರಿಂದ ಮೂರು ದಿನಗಳ ಕಾಲ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ 3 ನಾಟಕಗಳ ನಾಟಕೋತ್ಸವ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ನಾಟಕಗಳ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶ ಇರುತ್ತದೆ. ಮಾ.16 ರಂದು ಚಿದಂಬರರಾವ್ ಜಂಬೆ ನಿರ್ದೇಶನದ ಕಳ್ಳರೋ ಬಲುಗಳ್ಳರೋ, ಮಾ.17ರಂದು ಇಕ್ಬಾಲ್ ಅಹಮದ್ ನಿರ್ದೇಶನದ ಸೂಳೆ ಸನ್ಯಾಸಿ, ಮಾ.18ರಂದು ನಂ ಯತೀಶ (ಯಶಿ) ಕೊಳ್ಳೇಗಾಲ ನಿರ್ದೇಶನದ ಸದಾರಮೆ ನಾಟಕಗಳ ಪ್ರದರ್ಶನ ಇರುತ್ತದೆ.
21ರಂದು ಉಚಿತ ಸಲಹಾ ಶಿಬಿರ
ಚಿಕ್ಕಮಗಳೂರು: ರಾಷ್ಟ್ರೀಯ ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿತ (ಸಿವಿಡಿ) ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಹಾಗೂ ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ತಜ್ಞ ವೈದ್ಯರುಗಳಿಂದ ಕ್ಯಾನ್ಸರ್ ರೋಗ ಪತ್ತೆ ಹಚ್ಚುವ ಹಾಗೂ ಉಚಿತ ಸಲಹಾ ಶಿಬಿರವನ್ನು ಮಾ. 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.