ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಿಳಾ ಸರ್ಕಾರಿ ಪ್ರ.ದರ್ಜೆ ಕಾಲೇಜು ಮಂಜೂರು

Lingaraj Badiger
Updated On : 16 Mar 2013, 10:43 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 15
ನಗರಕ್ಕೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಆಲ್ದೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ 10 ಪ್ರಥಮ ದರ್ಜೆ ಮಹಿಳಾ ಕಾಲೇಜು ಮಂಜೂರು ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಲ್ಲಿ ಚಿಕ್ಕಮಗಳೂರು ಮಾ.16ರ ಶನಿವಾರವೇ ರಾಜ್ಯ ಸರ್ಕಾರ ಕಾಲೇಜು ಮಂಜೂರು ಮಾಡಿ ಆದೇಶ ಹೊರಡಿಸಲಿದೆ ಎಂದರು.
13 ಎಂಜಿನಿಯರಿಂಗ್ ಕಾಲೇಜು: ಶಿಕ್ಷಣಕ್ಕೆ ನಮ್ಮ ಸರ್ಕಾರ ನೀಡಿದಷ್ಟು ಪ್ರಾಮುಖ್ಯತೆ ಹಿಂದಿನ ಯಾವ ಸರ್ಕಾರವೂ ನೀಡಿರಲಿಲ್ಲ. ಇದು ಬೇರೆಯವರ ಬಗೆಗಿನ ವಿರೋಧದ ಮಾತಲ್ಲ. ಈ ಹಿಂದೆ ರಾಜ್ಯದಲ್ಲಿ ಕೇವಲ ಒಂದೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಿಕ್ಕಮಗಳೂರು ಸೇರಿದಂತೆ ಒಟ್ಟು 13 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾಗಿವೆ. 38 ಇದ್ದ ಸರ್ಕಾರಿ ಪಾಲಿಟೆಕ್ನಿಕ್ ಈಗ 52 ಇವೆ ಎಂದು ಹೇಳಿದರು.
ಶಿಕ್ಷಣದ ಮೂಲಕ ಪರಿವರ್ತನೆ ಸಾಧ್ಯ ಎಂಬುದನ್ನು ಅರಿತ ರಾಜ್ಯ ಸರ್ಕಾರ ಯುವ ಮನಸ್ಸು ಜೋಡಿಸುವ ಕೆಲಸ ಮಾಡುತ್ತಿದೆ. ವಿದ್ಯಾವಂತರಿಗೆ ಸ್ವಾವಲಂಬನೆಯ ಬಗ್ಗೆ ತಿಳಿಸಿಕೊಡಲು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಡ ಪ್ರತಿಭಾವಂತರಿಗೆ ಶಿಕ್ಷಣ ಮರಿಚಿಕೆ ಆಗಬಾರದು ಎಂಬ ಉದ್ದೇಶದಿಂದ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತೀಯರು ಪ್ರಬುದ್ಧರಾಗಬೇಕು. ಆ ನಿಟ್ಟಿನಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದ ಸಚಿವರು, ಚಿಕ್ಕಮಗಳೂರಿನಲ್ಲಿ ಸ್ಥಾಪನೆ ಆಗಲಿರುವ ಎಂಜಿನಿಯರಿಂಗ್ ಕಾಲೇಜಿಗೆ  50 ಕೋಟಿ ರುಪಾಯಿ ನೀಡಲಾಗುತ್ತಿದೆ. ಇದರಲ್ಲಿ ಬಾಲಕ ಮತ್ತು  ಬಾಲಕಿಯರಿಗೆ ಪ್ರತ್ಯೇಕವಾದ ಹಾಸ್ಟಲ್ ನಿರ್ಮಾಣ ಮಾಡಲಾಗುವುದು. ಈ ಕಾಲೇಜು ಕಟ್ಟಡಕ್ಕಾಗಿ ಇಂದಾವರ ಗ್ರಾಮದಲ್ಲಿ  30 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಸವಿತಾ ರಮೇಶ್, ಭಾಗ್ಯ ರಂಗನಾಥ್, ತಾಪಂ ಉಪಾಧ್ಯಕ್ಷ ಪುಟ್ಟೇಗೌಡ, ಸದಸ್ಯ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷರಾದ ಮಹೇಶ್, ಜಯಶೀಲ ಚಿದಂಬರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement