ಸ್ವಾವಲಂಬನೆಯೆಡೆಗೆ ಸಾಗಿದಾಗ ರಾಷ್ಟ್ರಾಭಿವೃದ್ಧಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.15
ಗ್ರಾಮೀಣ ಪ್ರದೇಶಗಳು ಆರ್ಥಿಕ ಸ್ವಾವಲಂಬನೆಯೆಡೆಗೆ ಸಾಗಿದಾಗ ರಾಷ್ಟ್ರಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಾಹಿತಿ ಮೇಟಿ ಮಲ್ಲಿಕಾರ್ಜುನ ಹೇಳಿದ್ದಾರೆ.
ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಗುರುವಾರ ನಡೆದ ಸಾಹಿತ್ಯ ಸಂಭ್ರಮದಲ್ಲಿ ಆರ್ಥಿಕ ಮತ್ತು ಮಾಧ್ಯಮ ತಲ್ಲಣಗಳು ಎಂಬ ವಿಷಯ ಮಂಡಿಸಿ ಮಾತನಾಡಿದರು.
ದೇಶಕ್ಕೆ ಅನ್ನ ನೀಡುವ ಉತ್ಪಾದನೆಯಲ್ಲಿ ನಿರತ ಗ್ರಾಮೀಣ ಪ್ರದೇಶದ ರೈತ, ಕೃಷಿ ಕೂಲಿ ಕಾರ್ಮಿಕರ, ದಲಿತರ ಸಮೂಹ ಆರ್ಥಿಕ ಮುಗ್ಗಟ್ಟಿಗೆ ನಿಲುಕಿದ್ದು ಗ್ರಾಮೀಣ ಜನ ಸಮೂಹದ ಬದುಕು ದಸ್ತರವಾಗುತ್ತಿದೆ. ರಾಷ್ಟ್ರೀಯ ಸ್ವಾವಲಂಬನೆಗೆ ವಿರುದ್ಧವಾದ ಆರ್ಥಿಕ ನೀತಿಗಳ ಅನುಷ್ಠಾನದಿಂದ ಮನುಷ್ಯ, ಮನುಷ್ಯರ ನಡುವಿನ ಸಾಮಾಜಿಕ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಔದ್ಯಮಿಕ ಕ್ಷೇತ್ರದಲ್ಲಿ ದುಡಿಯುವ ಜನರ ಸಂಬಳದಲ್ಲೂ ಅಂತರ ವ್ಯಾಪಕವಾಗಿದೆ. ಅಲ್ಲದೆ ಜಾತಿ, ಮತಗಳ ನಡುವೆ ಬಿರುಕು ಸೃಷ್ಟಿಸಿ ಪರಸ್ಪರ ಹೊಂದಾಣಿಕೆಯ ಬದುಕು ಕೂಡಾ ಮರೀಚಿಕೆಯಾಗುತ್ತಿದೆ. ಇಂತಹ ತಲ್ಲಣಗಳಿಗೆ ನಮ್ಮ ಶೈಕ್ಷಣಿಕ ವ್ಯವಸ್ಥೆ ಹಾಗೂ ರಾಜಕೀಯ ನೀತಿಯಲ್ಲಿನ ಲೋಪದೋಷಗಳೇ ಕಾರಣ ಎಂದರು.
ನೈತಿಕ ಅಧಃಪತನದತ್ತ: ವಿಷಯದ ಮೇಲೆ ಅಭಿಪ್ರಾಯ ಮಂಡಿಸಿದ ಸಾಹಿತಿ ಬಿ. ತಿಪ್ಪೇರುದ್ರಪ್ಪ, ಪ್ರಸ್ತುತ ನಮ್ಮ ಸಮಾಜ ನೈತಿಕ ಅಧಃಪತನದತ್ತ ಸಾಗುತ್ತಿದೆ. ಇದಕ್ಕೆ ಕಾರಣ ಸಮಾಜವನ್ನು ತಿದ್ದಿ ಬೋಧಿಸಬೇಕಾದ ಧರ್ಮಗುರುಗಳು ರಾಜಕಾರಣಿಗಳಂತೆ ವರ್ತಿಸುತ್ತಿರುವುದು, ರಾಜಕಾರಣಿಗಳು ಧರ್ಮಗುರುಗಳಂತೆ ನೀತಿ ಭೋದನೆಯಲ್ಲಿ ನಿರತರಾಗಿದ್ದಾರೆ. ಸಮಾಜದಲ್ಲಿ ಮೌಢ್ಯತೆ, ಅನ್ಯಾಯ ಶೋಷಣೆ ವ್ಯಾಪಕವಾಗಿದ್ದು ಇವುಗಳ ವಿರುದ್ಧ ಜನ ಸಮೂಹ ಜಾಗೃತಗೊಳ್ಳುವ ಜರೂರತ್ತು ಇದೆ ಎಂದು ಹೇಳಿದರು.
ಮಾಧ್ಯಮಗಳ ಕುರಿತು ಅಭಿಪ್ರಾಯಪಟ್ಟ ತಿಪ್ಪೇರುದ್ರಪ್ಪ, ಇಂದು, ಮಾಧ್ಯಮಗಳು ಸಹ ಉಧ್ಯಮವಾಗಿ ಪರಿವರ್ತನೆ ಹೊಂದಿದೆ. ಅಂದು ಪತ್ರಿಕೆಗಳಿಗೆ ವ್ಯವಸ್ಥೆಯ ಬಗ್ಗೆ ನಿರ್ದಿಷ್ಟ ಧೋರಣೆಗಳಿದ್ದವು. ಆದರೆ, ಇಂದು ಹಣ ಗಳಿಸುವುದೇ ಪ್ರಧಾನವಾಗಿದೆ ಎಂದು ವಿಷಾದಿಸಿದರು.
ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಬಹುತೇಕ ಧಾರಾವಾಹಿಗಳು ಕುಟುಂಬಗಳನ್ನು ವಿಭಜಿಸಲು ಪ್ರೇರೇಪಣೆ ನೀಡುವಂತಹವುಗಳಾಗಿವೆ ಎಂದು ಆತಂಕ ಹೊರಹಾಕಿದರು.
ಸೊರಗುತ್ತಿರುವ ಗ್ರಾಮ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಯುವಕರು ಗ್ರಾಮಗಳನ್ನು ತೊರೆದು ನಗರದೆಡೆಗೆ ಮುಖ ಮಾಡುತ್ತಿರುವುದರಿಂದ ಗ್ರಾಮಗಳು ಸೊರಗುತ್ತಿವೆ. ಐಷಾರಾಮಿ ಬದುಕಿಗೆ ಮಾರುಹೋಗಿ ತನ್ನತನವನ್ನು ಕಳೆದುಕೊಳ್ಳುತ್ತಿದ್ದೇವೆ. ಯುವ ಸಮೂಹದಲ್ಲಿ ಹುದುಗಿರುವ ಪ್ರತಿಭೆ, ಕೇವಲ ಶಾಲೆ, ಕಾಲೇಜುಗಳಿಗೆ ಸೀಮಿತವಾಗಿದೆ ಸಮಾಜದಲ್ಲೂ ಅನಾವರಣಗೊಳ್ಳಬೇಕೆಂದರು.
ಹುಲಿಕೆರೆ ದೊಡ್ಡ ಶ್ರೀವಿರೂಪಾಕ್ಷ ಲಿಂಗಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ದಲಿತ ಪರ ಹೋರಾಟಗಾರರಾದ ಜಿ.ಕೆ. ಬಸವರಾಜ್, ಪಿ. ವೇಲಾಯುಧನ್, ಕಸಾಪ ತಾಲೂಕು ಕಾರ್ಯದರ್ಶಿ ಮಲ್ಲದೇವರಹಳ್ಳಿ ಎಂ. ಪ್ರಭು, ಎಂ. ಪರಮೇಶ್ವಪ್ಪ, ಮುಖ್ಯ ಶಿಕ್ಷಕ ಶಿವಣ್ಣ ಉಪಸ್ಥಿತರಿದ್ದರು.