ಮಠಕ್ಕೆ ಹಣ: ಜಾತಿ ರಾಜಕೀಯ ಪೋಷಣೆ ದಿಕ್ಸೂಚಿ
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 16
ರಾಜ್ಯ ರಾಜಕಾರಣದಲ್ಲಿ ರಾಕ್ಷಸಿ ಪ್ರವೃತ್ತಿಯ ನಾಯಕತ್ವ ಮೆರೆಯುತ್ತಿರುವುದರಿಂದ ಕರ್ನಾಟಕ ಗಂಡಾಂತರಕಾರಿ ಸ್ಥಿತಿಗೆ ತಲುಪುತ್ತಿದೆ ಎಂದು ಸಾಹಿತಿ ಡಾ. ಕುಂಸಿ ಉಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿ ಶುಕ್ರವಾರ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು ಎಂಬ ವಿಷಯ ಕುರಿತು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬಜೆಟ್‌ನಲ್ಲಿ ಮಠ ಮಾನ್ಯಗಳಿಗೆ ಸರ್ಕಾರ ಹಣ ನೀಡುತ್ತಿರುವುದು ಭ್ರಷ್ಟ ವ್ಯವಸ್ಥೆ ಮತ್ತು ಜಾತಿ ರಾಜಕಾರಣವನ್ನು ಪೋಷಿಸುವ ದಿಕ್ಸೂಚಿಯಾಗಿದೆ. ಜಾತಿ, ಭಾಷೆ, ಅಧಿಕಾರಕ್ಕಾಗಿ ನಿರಂತರ ಸಂಘರ್ಷ ನಡೆಯುತ್ತಿದ್ದು, ಇದು ಸಾಂಸ್ಕೃತಿಕ, ಸಾಮಾಜಿಕ ಬದುಕಿನ ವಿನಾಶದ ಸಂಕೇತ ಎಂದು ಹೇಳಿದರು.
ಜಾಗೃತರಾಗಿ: ಧಾರ್ಮಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸುಲಿಗೆ ಕೋರತನ ಹೆಚ್ಚುತ್ತಿದೆ. ಸಮಾಜಕ್ಕೆ ಸದ್ವಿಚಾರ ನೀಡಬೇಕಾದ ಸಮಾಜ, ಅಂಕು ಡೊಂಕುಗಳನ್ನು ತಿದ್ದಬೇಕಾದ ವಿಶ್ವವಿದ್ಯಾನಿಲಯಗಳು ಏನನ್ನು ಹೇಳಾದ ಏನನ್ನು ಬರೆಯಲಾರದಂತಹ ದಯನೀಯ ಸ್ಥಿತಿಗೆ ತಲುಪಿದ್ದು, ಈ ಸಾಮಾಜಿಕ ಸಾಂಸ್ಕೃತಿಕ ತಲ್ಲಣಗಳನ್ನು ನಿವಾರಿಸಲು ಜನ ಜಾಗೃತಿಗೊಳ್ಳುವುದೊಂದೇ ಪರಿಹಾರ ಎಂದರು.
ಶಿವ ಸಂಚಾರ ತಂಡದ ಸದಾರಮೆ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಆಡಳಿತ ಕೂಡಾ ಜನಪ್ರತಿನಿಧಿಗಳು ಅಭಿವೃದ್ಧಿ ಎಂಬ ಹೆಸರಿನಲ್ಲಿ ಸ್ವಯಂ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದು ವ್ಯಾಪಕ ಭ್ರಷ್ಟಾಚಾರ ನಡೆಸಿ ಹಗಲು ದರೋಡೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಎಚ್ಚರಿಕೆ ಅಗತ್ಯ: ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಅವರು ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಐಕ್ಯತೆ, ಸೌಹಾರ್ಧತೆ, ಸಹಬಾಳೆ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ, ಇಂತಹ ಸಾಮಾಜಿಕ ಸಾಂಸ್ಕೃತಿಕ ಬದುಕಿಗೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯಾದರ್ಶಿ ಗುರುಶಾಂತಪ್ಪ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವ ಇಂದಿನ ಸಮಾಜದಲ್ಲಿ ನಾವು ಬೌದ್ಧಿಕ ದಿವಾಳಿತನಕ್ಕೆ ಒಳಗಾಗಿದ್ದೇವೆ. ಕೊಳ್ಳುಬಾಕುತನ ಸಂಸ್ಕೃತಿಗೆ ಮಾರು ಹೋಗಿರುವ ನಾಗರಿಕ ಸಮಾಜ ಬದುಕಿನ ವೈಭವಿಕರಣ ಅನುಕರಣೆಯಂತಹ ಹುಸಿ ಪ್ರತಿಷ್ಠೆಗೊಳಗಾಗಿರುವುದರಿಂದ ಜನರ ಆರ್ಥಿಕ ಸ್ಥಿತಿ ಚಿಂತಾಜನಕವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಎ.ಎನ್. ಮಹೇಶ್, ಬಾಳೂರು ಚೆನ್ನಪ್ಪ ಮಾತನಾಡಿದರು.
ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಉಪಾಧ್ಯಕ್ಷೆ ಮಾಲಿನಿಬಾಯಿ, ಸದಸ್ಯ ಕಲ್ಮರುಡಪ್ಪ, ಮೂಡಿಗೆರೆ ತಾ.ಪಂ. ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.