ಬಿಜೆಪಿ ಸರ್ಕಾರದ ಸಾಧನೆಗಳೇ ಗೆಲವಿಗೆ ಕಾರಣ
ಕನ್ನಡಪ್ರಭ ವಾರ್ತೆ, ಬೀರೂರು
ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳು ಜನರಿಗೆ ತಲುಪುವ ಮೂಲಕ ಮತದಾರರು ಬೀರೂರು ಪುರಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರೇಕಲ್ ಪ್ರಕಾಶ್ ಹೇಳಿದರು.
ಅವರು ಬೀರೂರು ಪಟ್ಟಣದಲ್ಲಿ ಬಿಜೆಪಿ ನಗರ ಘಟಕದಿಂದ ಪುರಸಭೆಗೆ ಆಯ್ಕೆಯಾದ ಬಿಜೆಪಿಯ ನೂತನ ಪುರಸಭಾ ಸದಸ್ಯರನ್ನು ಅಭಿನಂದಿಸಿ ಮಾತನಾಡುತ್ತಿದ್ದರು. ಪುರಸಭಾ ಚುನಾವಣೆಯಲ್ಲಿ ಕಳೆದ ಭಾರಿಗಿಂತ ಈ ಭಾರಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಹೆಚ್ಚು ಗೆಲ್ಲಿಸಿ ಪಕ್ಷದ ಬಲವರ್ಧನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸದಸ್ಯರು ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಬಲವಾಗಿ ಕಟ್ಟಬೇಕು ಎಂದರು.
ಬಿಜೆಪಿ ತಾಲೂಕು ಸಂಘನಾ ಕಾರ್ಯದರ್ಶಿ ಬಿ.ಎಂ. ಗಿರೀಶ್ ಮಾತನಾಡಿ, ಬಿಜೆಪಿ ಸಂಘಟನೆಗೆ ಬೀರೂರು ಪಟ್ಟಣವು ಅಡಿಪಾಯ ಹಾಕಿದೆ. ಭೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮಾಡುವ ಸಂಕಲ್ಪ ಮಾಡೋಣ ಎಂದರು.
ಪುರಸಭೆ ಸದಸ್ಯ ಎಸ್.ಎಸ್. ದೇವರಾಜ್ ಮಾತನಾಡಿ, ರಾಜಕೀಯ ನಿಷ್ಟೆ, ಪಕ್ಷ ನಿಷ್ಟೆ ಒಂದೇ ಕಡೆಯಿದ್ದರೆ ಮಾತ್ರ ಅಧಿಕಾರ ಪಡೆಯಲು ಸಾಧ್ಯ. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ವಾರ್ಡಿನ ಅಭಿವೃದ್ಧಿಗೆ ಶ್ರಮಿಸಿದಾಗ ಜನಪ್ರತಿನಿಧಿಯನ್ನು ಜನ ಗೌರವಿಸುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರನ್ನು ಅಭಿಂದಿಸಲಾಯಿತು.
ಸಮಾರಂಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜು, ಯುವಮೋರ್ಚಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್, ಹಿರಿಯ ಮುಖಂಡರಾದ ಕುಮಾರ್, ದಾಸಪ್ಪ, ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.