ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ
ಮೂಡಿಗೆರೆ: ಕಳಸ-ಮರಸಣಿಗೆ ಮತ್ತು ಚಿಕ್ಕಮಗಳೂರು-ಮಲ್ಲಂದೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ತಲಾ ಐದು ಲಕ್ಷ ರು.ಗಳ ಮಂಜೂರಾತಿ ದೊರೆತಿದೆ. ಉಗ್ಗೆಹಳ್ಳಿ, ಕಣಚೂರು, ಹಂತೂರು ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.
ಭಾನುವಾರ ತಾಲೂಕಿನ ಕಿರುಗುಂದ ಗ್ರಾಮದ ಮೂಡಿಗೆರೆ-ಸಕಲೇಶಪುರ ರಸ್ತೆಯಲ್ಲಿ 11 ಲಕ್ಷ ರು.ಗಳ ವೆಚ್ಚದಲ್ಲಿ 250 ಮೀಟರ್ ಡಾಂಬರೀಕರಣ ಮತ್ತು ಮೋರಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಮೂಡಿಗೆರೆ ಪಟ್ಟಣದ ಕಡೂರು-ಮಂಗಳೂರು ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆಯನ್ನು ಸರಕಾರವೇ ಕೈಗೆತ್ತಿಕೊಂಡಿರುವುದರಿಂದ ಟೆಂಡರ್ ಪ್ರಕ್ರಿಯೆ ಮುಕ್ತಾಯದ ಬಳಿಕ ಅಡ್ಡಿ, ಆತಂಕವಿಲ್ಲದೆ ಕಾಮಗಾರಿ ನಡೆಯಲಿದೆ ಎಂದರು. ಮೂಡಿಗೆರೆ ಕೆ.ಎಂ. ರಸ್ತೆ ರಾಜ್ಯ ಹೆದ್ದಾರಿಯಾಗಿರುವುದರಿಂದ ಸಹಜವಾಗಿಯೇ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಗಳಿದ್ದವು. ಈ ಹಿನ್ನೆಲೆಯಲ್ಲಿ ಸರಕಾರ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಸಮರ್ಪಕ ಕೆಲಸ ನಡೆಯುವ ಭರವಸೆ ವ್ಯಕ್ತಪಡಿಸಿದರು.
ಕಣಚೂರಿನಲ್ಲಿ 10 ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆ, ಹಂತೂರಿನಲ್ಲಿ ಕಾಂಕ್ರೀಟ್ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಜನ್ನಾಪುರ-ಕಿರುಗುಂದ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ ರು. ಮಂಜೂರಾಗಿದ್ದು, ಚಕ್ಕುಡಿಗೆ ರಸ್ತೆ ಕಾಮಗಾರಿಗೆ 1 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದ ಅವರು, ಸತ್ತಿಗಲ್ ಗ್ರಾಮದ ಕುಡಿಯುವ ನೀರಿನ ಕಾಮಗಾರಿಯನ್ನು ತಕ್ಷಣ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ನಂಜುಂಡಪ್ಪ, ಕಿರುಗುಂದ ಗ್ರಾಪಂ ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ಎಂ.ಆರ್.ನಝೀರ್, ಯು.ಎ. ರವಿಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜೆ.ಎಸ್. ರಘು, ಕಿರುಗುಂದ ಅಬ್ಬಾಸ್, ಬಿ.ಎನ್. ಮುತ್ತಪ್ಪ, ಕೆ.ಕೆ. ರಾಮಯ್ಯ, ಗ್ರಾಪಂ ಸದಸ್ಯ ರಮೇಶ್, ಹಂತೂರಿನ ಆಧಿತ್ಯ, ನಿಡುಗೋಡು ಸುನೀಲ್, ಗುತ್ತಿಗೆದಾರ ಓಂಕಾರ್, ಜನ್ನಾಪುರ ಸುಂದರ್, ಲೋಕೇಶ್ ಇದ್ದರು.