ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎ.ಬಿ. ವಾಜಪೇಯಿ ವಸತಿ ಬಡಾವಣೆಯಲ್ಲಿ ಅಕ್ರಮ: ಆರೋಪ

Lingaraj Badiger
Updated On : 19 Mar 2013, 10:30 am

ಕಪ್ರವಾರ್ತೆ,ಚಿಕ್ಕಮಗಳೂರು,ಮಾ. 18
ನಗರದ ಉಪ್ಪಳ್ಳಿಯಲ್ಲಿ ಸಿಡಿಎ ನಿರ್ಮಿಸುತ್ತಿರುವ ಎ.ಬಿ. ವಾಜಪೇಯಿ ವಸತಿ ಬಡಾವಣೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಈ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಜೆಡಿಎಸ್ ಮುಖಂಡ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.
 ಬಡಾವಣೆ ನಿರ್ಮಾಣಕ್ಕೆ ಆಕ್ಷೇಪ ಇಲ್ಲ. ಆದರೆ, ಬಡಾವಣೆ ನಿರ್ಮಾಣಕ್ಕೆ ಹಾಗೂ ನಿವೇಶನಗಳ ಮಾರಾಟದಿಂದ ಬರುವ ಹಣವನ್ನು ಲೆಕ್ಕ ಮಾಡಿದರೆ ಸರ್ಕಾರಕ್ಕೆ ಸುಮಾರು 20 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
20.88 ಕೋಟಿ ರುಪಾಯಿ ನಷ್ಟ: ಈ ಬಡಾವಣೆ ಅಭಿವೃದ್ಧಿಗೆ ಬರೋಬರೀ 160.89 ಕೋಟಿ ರುಪಾಯಿ ಖರ್ಚಾಗಲಿದೆ. ಆದರೆ, ಇಲ್ಲಿನ ನಿವೇಶನಗಳ ಮಾರಾಟದಿಂದ ಬರುವ ಮೊತ್ತ 141.61 ಕೋಟಿ ರುಪಾಯಿ ಅಂದರೆ ಸುಮಾರು 19.28 ಕೋಟಿ ರುಪಾಯಿ ವ್ಯತ್ಯಾಸ ಕಂಡು ಬರಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 50ರ ರಿಯಾಯಿತಿ ದರದಲ್ಲಿ ನಿವೇಶನ ನೀಡಿದರೆ, ಇದರಿಂದ ಸಿಡಿಎಗೆ ಬರುವ ಹಣದಲ್ಲಿ 1.60 ಕೋಟಿ ರುಪಾಯಿ ಖೋತವಾಗಲಿದೆ. ಆಗ ಒಟ್ಟಾರೆ ಸುಮಾರು 20.88 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಹೇಳಿದರು.
ನಿಯಮ ಗಾಳಿಗೆ: ಇಲ್ಲಿನ ಉಪ್ಪಳ್ಳಿಯಲ್ಲಿ 40,60 ಅನುಪಾತದಲ್ಲಿ ಜಮೀನು ಪಡೆದು ಅಲ್ಲಿ ನಿವೇಶನ ರಚಿಸಿ ಕಡಿಮೆ ದರದಲ್ಲಿ ವಿತರಣೆ ಮಾಡಲು 31-1-2011ರಲ್ಲಿ ನಡೆದ ಸಿಡಿಎ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಇದನ್ನು ಮರೆಮಾಚಿ 22-10-2012 ರಂದು 125.55 ಕೋಟಿ ರುಪಾಯಿಗಳ ಟೆಂಡರ್ ಕರೆಯಲಾಗಿದೆ. ಇದಕ್ಕೆ ಹಣಕಾಸು ಇಲಾಖೆ ಮತ್ತು ಸಚಿವ ಸಂಪುಟದ ಅನುಮತಿಯನ್ನು ಪಡೆಯಬೇಕು. ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಎರಡನೇ ಬಾರಿಗೆ ಟೆಂಡರ್ ಕರೆಯಲಾಗಿದ್ದು, ಈ ಬಡಾವಣೆಯ ಅಭಿವೃದ್ಧಿ ಕಾಮಗಾರಿಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಎಂಬ ಸಂಸ್ಥೆಗೆ 125.55 ಕೋಟಿ ರುಪಾಯಿಗೆ ನೀಡಲಾಗಿದೆ. 31-1-2011ರ ಸಭೆಯಲ್ಲಿ ಬಡಾವಣೆ ಅಭಿವೃದ್ಧಿಗೆ 85 ಕೋಟಿ ಎಂದು ಹೇಳಿ ತೀರ್ಮಾನ ತೆಗೆದುಕೊಂಡಿದ್ದರೂ ಸಹ ಟೆಂಡರ್‌ನಲ್ಲಿ 125.55 ಕೋಟಿ ನೀಡಲಾಗಿದೆ. ಅಂದರೆ ಹೆಚ್ಚುವರಿಯಾಗಿ 40 ಕೋಟಿ ರುಪಾಯಿಗಳ ಟೆಂಡರ್ ಕರೆಯಲಾಗಿದೆ ಎಂದು  ಆರೋಪಿಸಿದರು.
ನಿವೇಶನಗಳ ಕೊರತೆ: ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ 2008-09ರಲ್ಲಿ ನಗರದಲ್ಲಿ ನಿವೇಶನ ಆಕಾಂಕ್ಷಿಗಳ ಬೇಡಿಕೆಯ ಸಮೀಕ್ಷೆಯನ್ನು ಮಾಡಿದ್ದು, ಅದರಂತೆ 7,954 ಮಂದಿ 38,53,300 ರುಪಾಯಿ ಹಣವನ್ನು ಕಟ್ಟಿ ತಮ್ಮ ಹೆಸರನ್ನು  ನೋಂದಾಯಿಸಿಕೊಂಡಿದ್ದಾರೆ. ಸಿಡಿಎ, ಎ.ಬಿ. ವಾಜಪೇಯಿ ವಸತಿ ಬಡಾವಣೆಯಲ್ಲಿ ಈಗ ನಿರ್ಮಾಣ ಮಾಡುತ್ತಿರುವುದು 1,576 ನಿವೇಶನಗಳು, ಈ ನಿವೇಶನವನ್ನು ಈಗಾಗಲೇ ನಿವೇಶನಕ್ಕಾಗಿ ಹೆಸರು ನೋಂದಾವಣೆ ಮಾಡಿಕೊಂಡವರಿಗೆ ನೀಡಬೇಕಾಗಿತ್ತು. ನಗರದಲ್ಲಿ ನಿವೇಶನಗಳ ಕೊರತೆ ಇದ್ದರೂ ಇವುಗಳ ಹರಾಜು ಮಾಡುವ ಪ್ರಕ್ರಿಯೆ ಮುಂದುವರೆಸಿದೆ ಎಂದು ಹೇಳಿದರು.
 ಈ ಹೊಸ ಬಡಾವಣೆಯಲ್ಲಿ ಒಂದು ಅಡಿಗೆ 700 ರುಪಾಯಿ ನಿಗದಿಪಡಿಸಲಾಗಿದೆ. ಆದರೆ, ಈ ಬಡಾವಣೆಯ ಸುತ್ತಮುತ್ತ ಚಿಕ್ಕಮಗಳೂರು ತಾಲೂಕು ಉಪ ನೋಂದಣಾಧಿಕಾರಿಗಳ ಕಚೇರಿಯ ವ್ಯಾಪ್ತಿಗೆ ಒಳಪಡುವ ವಸತಿ ನಿವೇಶನಗಳ ಸ್ಥಿರಾಸ್ತಿಯ ದರ ಪ್ರತಿ ಚದರ ಅಡಿಯೊಂದಕ್ಕೆ 250 ರುಪಾಯಿ ಇದೆ. ನಗರದ ಹೃದಯ ಭಾಗದಲ್ಲಿರುವ ಸ್ಥಿರಾಸ್ತಿಯ ದರವನ್ನು ನಿಗದಿಪಡಿಸಲಾಗಿದೆ. ಅಡಿಗೆ 700 ರುಪಾಯಿ ನಿಗದಿಪಡಿಸಿ ನಿವೇಶನದಾರರಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಆ ಪ್ರದೇಶದ ಸುತ್ತಮುತ್ತ ಇದೇ ದರ ಅನ್ವಯವಾಗಲಿದೆ. ಇದರಿಂದ ತುಂಬಾ ತೊಂದರೆಯಾಗಲಿದೆ. ಅದುದರಿಂದ ಈ ಎಲ್ಲಾದರ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement