ಗುಣಮಟ್ಟದ ಬೋಧನೆಗೆ ಒತ್ತು ನೀಡಿ
ಕ.ಪ್ರ ವಾರ್ತೆ, ದಾವಣಗೆರೆ, ಮಾ.18
ಬಡ, ಮಧ್ಯಮ ವರ್ಗದ ಪಾಲಕರನ್ನು ರಕ್ತ ಹೀರುವ ಜಿಗಣೆಗಳಂತೆ ಹಣಕ್ಕಾಗಿ ಹೀರುವ ಖಾಸಗಿ ಶಾಲಾ - ಕಾಲೇಜುಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಗುಣಮಟ್ಟದ ಬೋಧನೆಗೆ ಬೋಧಕರು ಒತ್ತು ನೀಡಬೇಕು ಎಂದು ಸಕ್ಕರೆ, ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಹೆಚ್ಚುವರಿ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಗುಣಮಟ್ಟದ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಒದಗಿಸಬೇಕು. ಕೇವಲ ಖಾಸಗಿ ಶಾಲಾ- ಕಾಲೇಜಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುತ್ತದೆಂಬ ತಪ್ಪು ಕಲ್ಪನೆ ದೂರಾಗುವಂತೆ ಸರ್ಕಾರಿ ಶಾಲಾ- ಕಾಲೇಜಿನಲ್ಲೂ ಉತ್ತಮ ಶಿಕ್ಷಣ ನೀಡುತ್ತಿರುವುದು ಆಶಾದಾಯಕ ಸಂಗತಿ ಎಂದರು.
ಉತ್ತಮ ಶಿಕ್ಷಣ ಶ್ಲಾಘನೀಯ: ಅನೇಕ ಖಾಸಗಿ ಕಾಲೇಜು ಇಲ್ಲಿದ್ದರೂ, ಇಲ್ಲಿನ ಸಪ್ರದ ಕಾಲೇಜಲ್ಲಿ 3700ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು ಗಮನಾರ್ಹ ಅಂಶ.
ವರ್ಷದಿಂದ ವರ್ಷಕ್ಕೆ ಕಾಲೇಜಿನಲ್ಲಿ ಪ್ರವೇಶ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮೂಲಕ ಖಾಸಗಿ ಶಾಲಾ- ಕಾಲೇಜಿಗಿಂತ ಉತ್ತಮ ಶಿಕ್ಷಣವನ್ನು ಕಾಲೇಜಿನಲ್ಲಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಈಗಾಗಲೇ ಕಾಲೇಜಿಗೆ 2 ಎಕರೆ ಜಾಗದಲ್ಲಿ ಹೆಚ್ಚುವರಿ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದಕ್ಕಾಗಿ ಸರ್ಕಾರ ರು. 1.5 ಕೋಟಿ, ನಂತರದಲ್ಲಿ 75 ಲಕ್ಷ ಅನುದಾನ ನೀಡಲಾಗಿದೆ.
ಸರ್ಕಾರಕ್ಕೆ ಅಲ್ಪದಿನಗಳಷ್ಟೇ ಉಳಿದಿದೆ. ಒಂದು ವೇಳೆ ನಾನೇ ಗೆದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲಾ, ಕಾಲೇಜು ಸ್ಥಿತಿ ಮತ್ತಷ್ಟು ಉತ್ತಮ ಪಡಿಸುತ್ತೇವೆ. ಕಾಲೇಜಿಗೆ ಹೆಚ್ಚುವರಿ ಕೊಠಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡುವೆ ಎಂದು ಅವರು ತಿಳಿಸಿದರು.
ಹೊಣೆಗಾರಿಕೆ ಯೋಚಿಸಿ: ಅಧ್ಯಕ್ಷತೆ ವಹಿಸಿದ್ದ ವಿಪ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾವು ಮಾತನಾಡಿ, ಸರ್ವ ಕಾರ್ಯವನ್ನೂ ಸರ್ಕಾರವೇ ಮಾಡಬೇಕೆಂಬ ಕೆಟ್ಟ ಮನೋಭಾವ ಸಮಾಜದಲ್ಲಿದೆ.
ಇದಕ್ಕೆ ತಕ್ಕಂತೆ ರಾಜಕಾರಣಿಗಳೂ ಹಕ್ಕುಗಳಾಗಿ ಧ್ವನಿ ಎತ್ತುತ್ತಾರೆಯೇ ಹೊರತು, ತಮ್ಮ ಹೊಣೆಗಾರಿಕೆ ಏನೆಂಬ ಬಗ್ಗೆ ಯೋಚಿಸುತ್ತಿಲ್ಲ. ಇಂತಹ ಮನೋಭಾವ ಕೇವಲ ಜನರಲ್ಲೂ ಇದೆ ಎಂದರು.
ಕಾಲೇಜಿನಲ್ಲಿ ಸುಮಾರು 3700 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಓದುತ್ತಿದ್ದು, ಸ್ಥಳಾವಕಾಶ ಮತ್ತು ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಡಿಆರ್‌ಆರ್ ಪಾಲಿಟೆಕ್ನಿಕ್ ಕಾಲೇಜು ಜಾಗದಲ್ಲಿ ಹೆಚ್ಚು ಜಾಗವಿದೆ.
ಪಾಲಿಟೆಕ್ನಿಕ್‌ನವರಿಗೆ ಅಗತ್ಯವಿಲ್ಲ ಎಂದಾದರೆ ಮುಂಬರುವ ದಿನಗಳಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅಂತಹ ಜಾಗವನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಲಿದೆ ಎಂದು ಅವರು ತಿಳಿಸಿದರು.
ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ, ಕರ್ನಾಟಕ ಗೃಹ ಮಂಡಳಿ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಕಕ್ಕಯ್ಯನವರ್, ಸುಧೀರ್, ಪ್ರಾಚಾರ್ಯ ಪ್ರೊ.ಡಿ. ಬಸವರಾಜ, ಸಪ್ರದ ಮಹಿಳಾ ಕಾಲೇಜು ಪ್ರಾಚಾರ್ಯರಾದ ಬಿ.ಎನ್. ಹೊಳೆಹೊಸೂರು, ಪ್ರೊ. ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರೊ. ಗಂಗಾಧರಯ್ಯ ಹಿರೇಮಠ, ಪ್ರೊ.ಟಿ. ಮಂಜಣ್ಣ, ಪ್ರೊ.ಆರ್. ತಿಪ್ಪಾರೆಡ್ಡಿ, ಆರ್.ಜಿ. ಪ್ರಕಾಶ, ಅಜ್ಜಯ್ಯ, ಕುಮಾರಿ, ಬಸಮ್ಮ, ಪಲ್ಲವಿ, ತನ್ಮಯಿ, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಇದ್ದರು.