ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರು ಸಮಸ್ಯೆ ಪರಿಹರಿಸಲು ಯೋಜನೆ

Lingaraj Badiger
Updated On : 19 Mar 2013, 10:39 am

ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ.18
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಹಲವು ಯೋಜನೆ ರೂಪಿಸಲಾಗಿದೆ ಎಂದು ಜಿ ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ಈಗಾಗಲೇ ಭದ್ರಾ ಜಲಾಶಯದಿಂದ ಕಡೂರು ಮತ್ತು ತರೀಕೆರೆ ತಾಲೂಕಿನ 24 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಲಕ್ಕವಳ್ಳಿ ಬಳಿ ಪೈಪ್‌ಲೈನ್ ಹಾದು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಕೆಲಸ ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳಕ್ಕೆ ತೆರಳಿ ಪರಿಶೀಲನೆ: ಶನಿವಾರ ತಾವು ಜಿಪಂ ಉಪಾಧ್ಯಕ್ಷರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿದಾಗ, ಪೈಪ್‌ಲೈನ್ ಗ್ರಾಮದ ಹೊರಭಾಗದಿಂದ ನೇರವಾಗಿ ಕೊಂಡೊಯ್ಯಲು ಅನುಮತಿ ನೀಡಿದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆಲಸ ಆರಂಭಿಸಲಾಗಿದೆ ಎಂದರು.
ಈ ಕುಡಿಯುವ ನೀರಿನ ಯೋಜನೆ ಶೇ. 80 ಪೂರ್ಣಗೊಂಡಿದ್ದು, ಏಪ್ರಿಲ್ ತಿಂಗಳಿನಲ್ಲಿ ಕೆಲಸ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಮೇ ತಿಂಗಳಲ್ಲಿ ಕುಡಿಯುವ ನೀರನ್ನು ಕಡೂರು ತಾಲೂಕಿನ 14 ಹಳ್ಳಿ ಮತ್ತು ತರೀಕೆರೆ ತಾಲೂಕಿನ 10 ಗ್ರಾಮಗಳಿಗೆ ಒದಗಿಸಲಾಗುವುದು ಎಂದರು.
ನೀರು ನೀಡಲು ಯೋಜನೆ: ಈ ಭದ್ರಾ ಜಲಾಶಯದಿಂದ ಮತ್ತೆ 85 ಹಳ್ಳಿಗಳಿಗೆ ಕುಡಿಯುವ ನೀರನ್ನು ನೀಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಬಹುತೇಕ ಗ್ರಾಮಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ  ನೀಗಿಸಿದಂತಾಗುವುದು ಎಂದು ಹೇಳಿದ ಅವರು, ಕಡೂರು ತಾಲೂಕಿನ 45 ಗ್ರಾಮಗಳಿಗೆ ಹಾಗೂ ಶಿವನಿ ಸೇರಿದಂತೆ ಸುತ್ತಮುತ್ತಲ 40 ಹಳ್ಳಿಗಳಿಗೆ ನೀರು ಲಭ್ಯವಾಗಲಿದೆ ಎಂದು ತಿಳಿಸಿದರು.
ಯಗಚಿ ಹಿನ್ನೀರಿನಿಂದ ಈಗಾಗಲೇ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಈ ಪೈಪ್‌ಲೈನ್ ಹಾದುಹೋಗಿರುವ ಅಕ್ಕಪಕ್ಕದಲ್ಲಿ ಬರುವ 24 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಗಚಿ ಜಲಾಶಯದಿಂದ ಮುಗುಳುವಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ನೀರು ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಸಮಸ್ಯೆ ಉಲ್ಬಣ: ಜಿಲ್ಲೆಯ ಬಯಲು ಪ್ರದೇಶವಾದ ಕಡೂರು ತಾಲೂಕಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ವೇದಾವತಿ ನದಿಗೆ ದೊಡ್ಡ ಬ್ಯಾರೇಜ್ ಒಂದನ್ನು ನಿರ್ಮಿಸಲು ಯೋಜಿಸಲಾಗಿದೆ. ಅದರಂತೆ ಜಿ. ಯರದಕೆರೆ ಬಳಿ ಈ ಬ್ಯಾರೇಜ್ ನಿರ್ಮಿಸಿದರೆ ಚೌಳಹಿರಿಯೂರು, ವಕ್ಕಲಗೆರೆ, ಹೋಚಿಹಳ್ಳಿ ಮತ್ತು ಉಳಿಗೆರೆ ಪಂಚಾಯಿತಿಗೆ ನೀರು ನೀಡಲು ಸಹಕಾರಿಯಾಗುವುದೆಂದು ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹಾಗೂ ಕಡೂರು ತಾಲೂಕಿನ ದೇವನೂರಿಗೆ ಯಗಚಿ ಜಲಾಶಯದಿಂದ ಕುಡಿಯುವ ನೀರು ನೀಡಲು ಯೋಜನೆ ರೂಪಿಸಲಾಗಿದೆ. ಯಗಚಿಯಿಂದ ಕುಡಿಯುವ ನೀರು ಕರಡಿಗವಿ ಮಠಕ್ಕೆ ಪಂಪ್ ಮಾಡಿ, ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ 5 ಪಂಚಾಯಿತಿಗಳಿಗೆ ನೀರು ನೀಡಲು ಸಾಧ್ಯವಾಗುತ್ತದೆ. ಚಿಕ್ಕದೇವನೂರು, ಎಸ್.ಬಿದರೆ, ಸಿಂದಿಗೆರೆ, ಉಳಿಗೆರೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರ ಬಾಯಾರಿಕೆಯನ್ನು ನೀಗಿಸಿದಂತಾಗುವುದು ಎಂದರು.
ನೀರಿನ ಸಮಸ್ಯೆ: ತರೀಕೆರೆ ತಾಲೂಕಿನ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅದರಲ್ಲಿ 23 ಗ್ರಾಮದಲ್ಲಿ ಸಮಸ್ಯೆ ಹೆಚ್ಚಳಗೊಂಡಿದ್ದರಿಂದ ಟ್ಯಾಂಕರ್ ಮೂಲಕ ನೀರು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡೂರು ತಾಲೂಕಿನ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗುಡ್ಡದಹಟ್ಟಿ, ಬೊಮ್ಮೇನಹಳ್ಳಿ ಮತ್ತು ಎಚ್. ರಾಮಪುರ ಗ್ರಾಮದಲ್ಲಿ ಸಮಸ್ಯೆ ತೀವ್ರಗೊಂಡಿದೆ ಎಂದು ಉತ್ತರಿಸಿದರು.
ಚಿಕ್ಕಮಗಳೂರು ತಾಲೂಕಿನ 24 ಗ್ರಾಮಗಳಲ್ಲಿ ಅಲ್ಪಸ್ವಲ್ಪ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕಳಸಾಪುರ ಹೊರತುಪಡಿಸಿ, ಬೇರೆ ಯಾವುದೇ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿಲ್ಲವೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement