ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬ್ಯಾಂಕ್‌ಗಳು ಸಾಲ ವಸೂಲಿಗೆ ಆಸ್ತಿ ಜಪ್ತಿ ಮಾಡಿದರೆ ಹೋರಾಟ

Lingaraj Badiger
Updated On : 19 Mar 2013, 10:29 am

ಕಪ್ರವಾರ್ತೆ,ಚಿಕ್ಕಮಗಳೂರು,ಮಾ.18
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ರೈತರ ಆಸ್ತಿ ಜಪ್ತಿಗೆ ಮುಂದಾದರೆ ಈ ಪ್ರಕ್ರಿಯೆಯನ್ನು ತಡೆಯುವ ಹೋರಾಟವನ್ನು ನಡೆಸಲಾಗುವುದು ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಚ್. ದೇವರಾಜ್ ಎಚ್ಚರಿಕೆ ನೀಡಿದ್ದಾರೆ.
 ಸಾಲ ವಸೂಲಾತಿಗೆ ನಮ್ಮದೇನೂ ವಿರೋಧ ಇಲ್ಲ. ಆದರೆ, ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ. ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ರೈತರ ಆಸ್ತಿ ಜಪ್ತಿ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಂಸದರೇ ಉತ್ತರಿಸಿ: ಸಾಲ ವಸೂಲಾತಿಗಾಗಿ ಬ್ಯಾಂಕ್‌ಗಳು ನೋಟಿಸ್ ಜಾರಿ ಮಾಡುತ್ತಿವೆ. ಇದರಿಂದಾಗಿ ರೈತರಲ್ಲಿ ಆತಂಕ ಉಂಟಾಗಿದೆ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಜಿಲ್ಲೆಯ ಕಾಫಿ ಹಾಗೂ ಅಡಕೆ ಬೆಳೆಗಾರರಿಗೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಆಶ್ವಾಸನೆ ನೀಡಿ ವರ್ಷ ಕಳೆದರೂ ಈವರೆಗೆ ಸಾಲ ಮನ್ನಾ ಆಗಿಲ್ಲ. ಇದಕ್ಕೆ ಈ ಕ್ಷೇತ್ರದ ಸಂಸದರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ನೀಡಬೇಕು ಎಂದು ಹೇಳಿದರು.
ಬಿಜೆಪಿ ವಾಮಮಾರ್ಗ: ನೀತಿ ಸಂಹಿತೆಯ ಆಧಾರದ ಮೇಲೆ ಕೆಜೆಪಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಿತು. ಪಕ್ಷ ಉದಯವಾಗಿ ಕೇವಲ ಎರಡು ತಿಂಗಳಲ್ಲಿ ಕೆಜೆಪಿ ಪಕ್ಷಕ್ಕೆ ಶೇ.7.5ರಷ್ಟು ಮತಗಳು ಜಿಲ್ಲೆಯಲ್ಲಿ ಬಂದಿವೆ. ಚಿಕ್ಕಮಗಳೂರು ಹಾಗೂ ಶೃಂಗೇರಿ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಸಂಸ್ಥೆಗಳಲ್ಲಿ ಕೆಜೆಪಿ, ಬಿಜೆಪಿಯನ್ನು ಧೂಳಿಪಟ ಮಾಡಿದೆ. ಬಿಜೆಪಿ ವಾಮಮಾರ್ಗದಲ್ಲಿ ಚುನಾವಣೆ ನಡೆಸಿದೆ ಎಂದು ಆರೋಪಿಸಿದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಗೆಲವಿಗೆ ಅಭಿವೃದ್ಧಿಯೇ ಕಾರಣ ಎಂದು ಶಾಸಕರು ಹೇಳಿದ್ದಾರೆ. ಆದರೆ, ಸಿಡಿಎ ಅಧ್ಯಕ್ಷ ರಾಜಪ್ಪ ಅವರ ಮನೆಯಲ್ಲಿ ಅಕ್ರಮ ಮದ್ಯ ಪತ್ತೆಯಾಗಿದ್ದು, ಬಿಜೆಪಿ ಕಳೆದ ಚುನಾವಣೆಯನ್ನು ಯಾವ ರೀತಿಯಲ್ಲಿ ಎದುರಿಸಿದೆ ಎಂಬುದು ಇದರಿಂದ ತಿಳಿಯುತ್ತದೆ. ಚಿಕ್ಕಮಗಳೂರು ತಹಸೀಲ್ದಾರ್‌ರವರು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement