ರಸ್ತೆ ಅಭಿವೃದ್ಧಿಗೆ ಅನುದಾನ ಬಳಕೆ: ಎಂಪಿಕೆ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ.18
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರು. 10 ಕೋಟಿ ಮಂಜೂರಾಗಿದ್ದು, ಈ ಹಣವನ್ನು ಮೂಡಿಗೆರೆ ಕ್ಷೇತ್ರದ ಗ್ರಾಮಾಂತರ ಪ್ರದೇಶದ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರು ಸಮೀಪದ ಜಡಗನಹಳ್ಳಿಯಲ್ಲಿ ಸೋಮವಾರ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಅವರು, ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಧರಣಿ ನಡೆಸುವ ಮೂಲಕ ಏಕಾಂಗಿ ಹೋರಾಟದಿಂದ ರು. 10.97 ಕೋಟಿ ಅನುದಾನವನ್ನು ಒಂದೇ ಗಂಟೆಯಲ್ಲಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಇದು ತಾವು ನೀಡಿದ ಶಕ್ತಿಗೆ ಅಭಿವೃದ್ಧಿಯ ಮೂಲಕ ಪ್ರತಿಫಲ ನೀಡುವ ದೃಷ್ಟಿ ಹೊಂದಿ ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದರು.
ಅಭಿವೃದ್ಧಿಗೆ ಚಾಲನೆ: ಕುರುಬರಹಳ್ಳಿ, ರಾಮನಹಳ್ಳಿ, ಕುಳಾರಳ್ಳಿ, ಹೊಸಕೋಟೆ, ಹರಿಹರದಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈಗ ಬಿಡುಗಡೆಯಾಗಿರುವ ಹಣದಲ್ಲಿ ಒಟ್ಟಾರೆ ಕ್ಷೇತ್ರದ ಗ್ರಾಮಾಂತರ ಪ್ರದೇಶದ ಎಲ್ಲಾ ಹೋಬಳಿಯ ಬಹುತೇಕ ಗ್ರಾಮಗಳಿಗೆ ರಸ್ತೆ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ಎಸ್.ಎಚ್.ಡಿ.ಪಿ. ಯೋಜನೆಯಡಿಯಲ್ಲಿ ರಾಜ್ಯ ಹೆದ್ದಾರಿಗಳಾದ ಹೊರನಾಡು- ಜಾವಳಿ ರಸ್ತೆಗೆ ರು. 5 ಕೋಟಿ ಮತ್ತು ಮಲ್ಲಂದೂರು- ಚಿಕ್ಕಮಗಳೂರು ರಸ್ತೆಗೆ ರು. 5 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದರು.
ಹಕ್ಕುಪತ್ರ ನೀಡಿಕೆ: ಫಾರಂ ಸಂಖ್ಯೆ 53 ರಲ್ಲಿ ಅರ್ಜಿ ಸಲ್ಲಿಸಿರುವ ಹೊಸಕೋಟೆ, ಕುರುಬರಹಳ್ಳಿ, ರಾಮನಹಳ್ಳಿ, ಹರಿಹರದಹಳ್ಳಿ, ಜಡಗನಹಳ್ಳಿ ಭಾಗದ 250 ಮಂದಿಗೆ ಸದ್ಯದಲ್ಲೇ ಹಕ್ಕುಪತ್ರ ನೀಡಲಾಗುವುದೆಂದರು. ಶಾಸಕನಾಗುವ ಮುನ್ನ ಭರವಸೆ ಕೊಟ್ಟ ಬಹುತೇಕ ಆಶ್ವಾಸನೆ ಈಡೇರಿಸಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನಹಿತದ ಹಲವು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿದ್ದು, ನಾವು ಮಾಡಿದ ಅಭಿವೃದ್ಧಿಯೇ ಮುಂದಿನ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಪಂ ಸದಸ್ಯ ನಿರಂಜನ್ ಮಾತನಾಡಿ, ಕಾಲೋನಿ ಅಭಿವೃದ್ಧಿ, ಬಡವರಿಗೆ ರು. 2 ಕೆ.ಜಿ. ಅಕ್ಕಿ ಈ ರೀತಿ ಹಲವು ಜನಪರ ಯೋಜನೆ ರೂಪಿಸಲಾಗಿದೆ ಎಂದರು. ಎಪಿಎಂಸಿ ಸದಸ್ಯ ನಿಂಗೇಗೌಡ, ತಾಪಂ ಸದಸ್ಯೆ ನೀಲಮ್ಮ ಧರ್ಮೇಗೌಡ, ಮುಖಂಡ ಧರ್ಮೇಗೌಡ, ಶಂಕರೇಗೌಡ, ಲಕ್ಷ್ಮಣ್, ಗಂಗಾಧರ್, ಮಂಜೇಗೌಡ, ಮಲ್ಲೇಶಗೌಡ, ಕೆಂಚೇಗೌಡ, ತೇಜೇಗೌಡ ಹಾಜರಿದ್ದರು.