ಇಂದು ಉಪವಾಸ ಸತ್ಯಾಗ್ರಹ
ಕೊಪ್ಪ: ಅಡಕೆ ಹಳದಿ ಎಲೆ ರೋಗ ಪೀಡಿತ ಸಂತ್ರಸ್ತ ರೈತರ ಸಂಕಷ್ಟಕ್ಕೆ ಪರಿಹಾರ ಸೂಚಿಸಿರುವ ಗೋರಖ್ ಸಿಂಗ್ ವರದಿ ಜಾರಿಗೆ ಒತ್ತಾಯಿಸಿ ಕೊಪ್ಪ ತಾಲೂಕು ಕಚೇರಿ ಆವರಣದಲ್ಲಿ 20 ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಕೆ.ಸಿ. ಸತೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಗೋರಖ್ ಸಿಂಗ್ ವರದಿ ಜಾರಿ ಬಗ್ಗೆ ಕೇವಲ ಆಶ್ವಾಸನೆಯಲ್ಲೇ ದಿನಕಳೆಯುತ್ತಿದ್ದು, ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿಲ್ಲದ ಕಾರಣ ರೈತಸಂಘ ರೈತರ ಪರವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸಲಿದೆ ಎಂದರು.
ರೈತ ಸಂಘದ ಕ್ಷೇತ್ರ ಕಾರ್ಯದರ್ಶಿ ಸುಧೀರ್ ಕುಮಾರ್ ಮೆರೋಳ್ಳಿ ಮಾತನಾಡಿ, ರೈತರ ಹಿತಕಾಯಬೇಕಾದ ರಾಜ್ಯಮತ್ತು ಕೇಂದ್ರ ಸರ್ಕಾರದ ಸಚಿವರು, ಜನ ಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ರೈತರನ್ನು ಬಳಸಿಕೊಂಡು ಸಮಯಕಳೆಯುತ್ತಿದ್ದಾರೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುರ ಹರೀಶ್, ನವೀನ್ ಕಿರುವಾನೆ, ಚಿಂತನ್ ಬೆಳಗೊಳ, ರವೀಂದ್ರ ವಗಳೆ, ಬೆಳ್ಳಿಯಪ್ಪ ಗೌಡ, ರತ್ನಾಕರ್, ಬೆಳ್ಳಿಯಪ್ಪ ಗೌಡ ಇದ್ದರು.