ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್ ಶಾಸಕರಿಗೆ ಈಶ್ವರಪ್ಪ ಶಹಬ್ಬಾಸ್

Parashurama
Updated On : 19 Mar 2013, 9:42 am

ಕ.ಪ್ರ ವಾರ್ತೆ ಅರಸೀಕೆರೆ ಮಾ.19
ಕಳೆದ 60 ವರ್ಷಗಳಲ್ಲಿ ಯಾವುದೇ ಸರ್ಕಾರ ಮಾಡಲಾಗದಂಥ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕೇವಲ 5 ವರ್ಷಗಳಲ್ಲಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿ ಕೊಂಡಿದ್ದಾರೆ.
ಪಟ್ಟಣದ ಸರ್ಕಾರಿ ಹಳೇ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ 150.50 ಕೋಟಿ ರು. ವೆಚ್ಚದಲ್ಲಿ 477 ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯವನ್ನಾಳಿದ ಯಾವುದೇ ಸರ್ಕಾರಗಳು ಸಾಧಿಸಲಾಗದಷ್ಟು ಪ್ರಗತಿಯನ್ನು ಕೇವಲ 5 ವರ್ಷಗಳಲ್ಲಿ ಸಾಧಿಸಿದ್ದೇವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಪಕ್ಷಭೇದ, ಜಾತಿಭೇದ ಮಾಡದೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ ಕೀರ್ತಿ ಬಿಜೆಪಿ ಸರ್ಕಾರದ್ದಾಗಿದೆ ಎಂದರು.
ಕೆಲಸ ಸಾಧಿಸಲು ನಕ್ಷತ್ರಿಕನಂತೆ ಬೆನ್ನು ಹತ್ತಿದ ಶಾಸಕ: ಶಾಸಕ ಕೆ.ಎಂ.ಶಿವಲಿಂಗೇಗೌಡರು ತಮ್ಮ ಕೆಲಸ ಸಾಧಿಸಲು ನಕ್ಷತ್ರಿಕನಂತೆ ಬೆನ್ನು ಹತ್ತಿದ್ದಾರೆ. ್ಣಅವರು ಕುತಂತ್ರ ರಾಜಕಾರಣ ಮಾಡಿದ್ದರೆ, ಈ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಿಗೆ ನೀರು ಬರಲು ಸಾಧ್ಯವಾಗುತ್ತಿರಲಿಲ್ಲ. ಶಾಸಕರ ಪ್ರಯತ್ನದಿಂದ 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಇದೀಗ ಚಾಲನೆ ದೊರೆತಿದೆ. ಇದರ ಕಾಮಗಾರಿ ನಿರ್ವಹಿಸುವ ಜಿಂದಾಲ್ ಕಂಪನಿಯವರು ಗಮನದಲ್ಲಿಟ್ಟು 12 ತಿಂಗಳಲ್ಲಿ ಕಾಮಗಾರಿ ಪೂರೈಸಿ ನೀರು ದೊರಕಿಸಬೇಕು ಎಂದು ಕೊಂಡಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಆಶ್ಚರ್ಯಚಕಿತರನ್ನಾಗಿ ಮಾಡಿದರು.
ತಾಲೂಕಿನ 477 ಹಳ್ಳಿಗಳಿಗೆ ಸುಮಾರು 150.50 ಲಕ್ಷ ಕೋಟಿ ರು. ವೆಚ್ಚದಲ್ಲಿ ಹೇಮಾವತಿ ನದಿಮೂಲದಿಂದ ನೀರೊದಗಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಶೀಘ್ರದಲ್ಲಿಯೇ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಗತ್ಯಕ್ಕೆ ತಕ್ಕಂತೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲ:  ದೇಶದಲ್ಲೇ ತೀವ್ರ ಬರಗಾಲ ಎದುರಿಸುತ್ತಿರುವ ರಾಜ್ಯ ಕರ್ನಾಟಕ ಎಂದು ಕೇಂದ್ರ ಕೃಷಿ ಸಚಿವರು ಹೇಳುತ್ತಿದ್ದರಾದರೂ ಅದಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಲಿಲ್ಲ. ಕೇಂದ್ರದ ಬರಪರಿಹಾರ 3 ತಂಡಗಳು ರಾಜ್ಯಕ್ಕೆ ಆಗಮಿಸಿ ಸಮಗ್ರ ವರದಿ ನೀಡಿದ್ದರೂ ಎಲ್ಲಾ ರಾಜ್ಯಗಳಿಗಿಂತ ಕಡಿಮೆ ಅನುದಾನ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ ಎಂದು ದೂರಿದರು.
ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಸರ್ಕಾರ ಎಂಬ ಭಾವನೆಯೇ ಹೊರತು ಬೇರೇನೂ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ. ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗೂ ಸಮಾಜ ಕಲ್ಯಾಣದ ಗುರಿ ಇರಬೇಕು. ಆಗ ಮಾತ್ರ ದೇಶದ ಉದ್ಧಾರ ಸಾಧ್ಯವೆಂದು ಹೇಳಿದರು. ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಸಂಘಸಂಸ್ಥೆಗಳು, ಮಠ ಮಾನ್ಯಗಳು ನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಠ- ಮಂದಿರಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಆದರೆ ಕೆಲವರು ಜಾತಿಯ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿರುವುದು ದುರಂತದ ಸಂಗತಿ ಎಂದರು. ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಓಟಿಗಾಗಿ 1-2 ಸಾವಿರ ರು. ನೀಡುವುದು ಅಥವಾ ಕುಕ್ಕರ್, ಸೀರೆ ಹಂಚುವಂತಹ ಹೀನಾಯ ಮಟ್ಟಕ್ಕೆ ಇಳಿದಿರುವುದು ಚುನಾವಣಾ ವ್ಯವಸ್ಥೆಯನ್ನು ಅಣಕಿಸುವಂತಿದೆ. ಇದು ರಾಜಕೀಯ ದುರಂತದ ಪರಮಾವಧಿ ಎಂದು ವಿಶ್ಲೇಷಿಸಿದರು.
ರಾಜಕೀಯ ಇಚ್ಛಾಶಕ್ತಿ ಬೇಕೆ ಹೊರತು:  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಬೇಕೆ ಹೊರತು ಬೇರೇನೂ ಅಲ್ಲ. ರಾಜ್ಯದಲ್ಲಿ  ನಮ್ಮ ಹಳ್ಳಿ ನಮ್ಮ ರಸ್ತೆ  ಯೋಜನೆಯಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 30 ಕಿಮೀ ರಸ್ತೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಹಾಸನ ಜಿಲ್ಲೆಯ ರಸ್ತೆಗಳ ಗುಂಡಿಗಳನ್ನು ಈಗ ಮುಚ್ಚಲಾಗುತ್ತಿದೆ ಎಂಬ ಮಾಜಿ ಸಚಿವ ರೇವಣ್ಣನವರ ಹೇಳಿಕೆ ಉಲ್ಲೇಖಿಸಿ ನಮ್ಮ ಸರ್ಕಾರ ಬರುವವರೆಗೆ ಗುಂಡಿ ಮುಚ್ಚಿರಲಿಲ್ಲ ಎಂಬ ಸತ್ಯ ತಿಳಿಸಿದ್ದೀರಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕೇಂದ್ರ ಸರ್ಕಾರ ನಡೆಸಿದ್ದ ಸರ್ವೇಯಲ್ಲಿ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ 2ನೇ ಸ್ಥಾನದಲ್ಲಿದೆ. ಬರಲಿರುವ ದಿನಗಳಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಬೇಕಾದರೆ ಬಿಜೆಪಿ ಸರ್ಕಾರವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments