ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮರಳು ದಂಧೆಗೆ : ಕಡಿವಾಣ ಹಾಕಿ

Mainashree
Updated On : 20 Mar 2013, 11:08 am

ಕಪ್ರ ವಾರ್ತೆ ಚಿಕ್ಕಮಗಳೂರು ಮಾ. 19
ಜಿಲ್ಲೆಯ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ, ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಸಣ್ಣ ಬೆಳೆಗಾರರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ  ಸಂಬಂಧ ಜಿಲ್ಲಾಧಿಕಾರಿ ವಿ. ಯಶವಂತ್ ಅವರಿಗೆ ಮಂಗಳವಾರ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಜಿಲ್ಲೆಯ ಪ್ರಮುಖ ನದಿಗಳಾದ ಹೇಮಾವತಿ, ತುಂಗಾ, ಭದ್ರಾ, ಯಗಚಿ, ವೇದಾವತಿ ಮತ್ತು ಉಪನದಿಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳಿದರು.
ನಿಯಮ ಉಲ್ಲಂಘನೆ: ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ, ಕರ್ನಾಟಕದಲ್ಲಿ ಹೊಸ ಮರಳು ನೀತಿ- 2011 ಜಾರಿಗೆ ತರಲಾಗಿದೆ. ಆದರೆ, ಈ ನಿಯಮಗಳನ್ನು ಉಲ್ಲಂಘನೆ ಮಾಡಿ ಜೆಸಿಬಿ ಯಂತ್ರಗಳ ಮೂಲಕ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದಾರೆ. ಹೊಸ ಮರಳು ನೀತಿಯ ಪ್ರಕಾರ ಯಾವುದೇ ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನಾಗಲೀ ಅಥವಾ ತೂಕದ ಯಂತ್ರಗಳನ್ನು ಅಳವಡಿಸದೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದರು.
ಮರಳು ಗಣಿಗಾರಿಕೆಯಿಂದ ನೆಲ, ಜಲ, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಮರಳು ಲಾರಿಗಳು ಓವರ್ ಲೋಡ್ ಮಾಡಿ ಓಡಾಡುತ್ತಿರುವುದರಿಂದ ರಸ್ತೆ ಮತ್ತು ಸೇತುವೆಗಳಿಗೆ ಅತಿಯಾದ ಹಾನಿಯುಂಟಾಗಿದೆ. ರೈತರ ಕೃಷಿ ಜಮೀನುಗಳು ಸಹ ಹಾಳಾಗಿವೆ ಎಂದು ಹೇಳಿದರು.
ಅಕ್ರಮ ಮರಳು ದಂಧೆ: ಸರ್ಕಾರಕ್ಕೆ ಕೋಟಿಗಟ್ಟಲೆ ರಾಜಧನ ವಂಚಿಸಿ ಹಗಲು ರಾತ್ರಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ. ಗಣಿ ಮಾಫಿಯ ದಂಧೆಕೋರರು ಈ ಹಣದಿಂದ ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವವರಿಗೆ ಜೀವ ಬೆದರಿಕೆ ಹಾಕುತ್ತಿದ್ದು, ಇದರಲ್ಲಿ ಅಧಿಕಾರಿಗಳು ಮತ್ತು ಪ್ರಭಾವಿ ಜನಪ್ರತಿನಿಧಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆ, ಪೊಲೀಸ್, ಲೋಕೋಪಯೋಗಿ, ಸಾರಿಗೆ, ಗಣಿ ಮತ್ತು ಭೂ ವಿಜ್‌ಞಾನ ಇಲಾಖೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದೇ ನಿಷ್ಕ್ರೀಯವಾಗಿವೆ ಎಂದರು.
ರಾಜ್ಯ ರೈತ ಮುಖಂಡ ಬೋರಯ್ಯ ಮಂಡ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಲ್ಲು ನಾಗರಾಜ್, ಜಿಲ್ಲಾ ಸಂಚಾಲಕ ಕೆ.ಎನ್. ಮನೋಜ್, ತರೀಕೆರೆ ತಾಲೂಕು ಅಧ್ಯಕ್ಷ ಲಕ್ಷ್ಮಣಯ್ಯ, ಮೂಡಿಗೆರೆ ತಾಲೂಕು ಅಧ್ಯಕ್ಷ ನಾಗೇಶ್, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಅಶೋಕ್, ಜಿಲ್ಲಾ ಕಾರ್ಯಾಧ್ಯಕ್ಷ ದಯಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement