ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೂಳೆತ್ತುವಲ್ಲಿ ಅಕ್ರಮ: ಪ್ರತಿಭಟನೆ

Mainashree
Updated On : 20 Mar 2013, 11:04 am

ದೇವಿಕೆರೆ ಮತ್ತು ಮಾವಿನಮರದ ಕೆರೆಯ ಹೂಳೆತ್ತುವಲ್ಲಿ ಅಕ್ರಮ: ತನಿಖೆಗೆ ಒತ್ತಾಯ
ಮೂಡಿಗೆರೆ: ತಾಲೂಕಿನ ದಾರದಹಳ್ಳಿಯ ದೇವಿಕೆರೆ ಮತ್ತು ಮಾವಿನಮರದ ಕೆರೆಯ ಹೂಳೆತ್ತುವಲ್ಲಿ ಬಾರಿ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಕೆರೆಯ ಮುಂದೆ ಪ್ರತಿಭಟನೆ ನಡೆಸಿದರು.
 ಈ ವೇಳೆ ರೈತ ಮುಖಂಡ ಪುಟ್ಟಸ್ವಾಮಿಗೌಡ ಮಾತನಾಡಿ, ಕೆಸವೊಳಲು ಸರ್ವೇ ನಂ.341ರಲ್ಲಿ ಜೋಗಣಕೆರೆಯ ದೇವಿಕೆರೆ ಅಭಿವೃದ್ಧಿಗೆ ಜಿಪಂನಿಂದ ಕೆರೆಗಳ ಪುನರುಜ್ಜೀವನ ವೆಚ್ಚವೆಂದು 2012-13ನೇ ಸಾಲಿನಲ್ಲಿ ದೇವಿಕೆರೆಗೆ 18.ಲಕ್ಷ ಅಂದಾಜು ವೆಚ್ಚ ಬಿಡುಗಡೆಯಾಗಿದೆ. ಅಲ್ಲದೆ ಈ ಕೆರೆಗೆ ಈ ಹಿಂದೆ 1984ರಿಂದಲೂ 2013ರರವರೆಗೆ ಸುಮಾರು 1ಕೋಟಿ ರು.ಗೂ ಅಧಿಕ ಹಣ ಬಿಡುಗಡೆಯಾಗಿದ್ದು, ಈವರೆಗೂ ಯಾವ ಅಭಿವೃದ್ಧಿಯೂ ನಡೆದಿಲ್ಲ. ಅಭಿವೃದ್ಧಿ ಹಣ ಕೆರೆ ನುಂಗಿ ಹಾಕಿದೆ ಎಂದು ವ್ಯಂಗ್ಯವಾಡಿದರು.
 ದೇವಿಕರೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸ.ನಂ.349ರ ಮಾವಿನಮರದ ಕೆರೆಯನ್ನು ಕೆಲ ವ್ಯಕ್ತಿಗಳು ಅತಿಕ್ರಮಿಸಿದ್ದು, ಈ ಬಗ್ಗೆ ಹಿಂದೆಯೆ ಗ್ರಾಮಸ್ಥರು ತಹಸೀಲ್ದಾರರಿಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಜೂನ್ 2012 ರಲ್ಲಿ ತಹಸೀಲ್ದಾರರು ಯಾವುದೇ ಅತಿಕ್ರಮಣವಾಗಿಲ್ಲವೆಂದು ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಆದರೆ ಒತ್ತುವರಿಯಾಗಿರುವ ಚಿತ್ರಣ ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಬಗ್ಗೆ ಮತ್ತೆ ಸರ್ವೇ ನಡೆಸಿ ಒತ್ತುವರಿಯನ್ನು ಖುಲ್ಲಾಗೊಳಿಸಿ ಕೆರೆಯನ್ನು ಕಾಪಾಡಬೇಕು. ಜೊತೆಗೆ ಒತ್ತುವರಿಯಾಗಿಲ್ಲವೆಂದು ಆದೇಶ ನೀಡಿದ ಅಂದಿನ ತಹಸೀಲ್ದಾರರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.
 ಜಿಪಂ ಕಿರಿಯ ಅಭಿಯಂತರೋರ್ವರು 2009 ರಲ್ಲಿ ನಿರ್ಮಿಸಿದ ಕೆರೆಯ ಕೋಡಿಯನ್ನು ಇತ್ತೀಚೆಗೆ ಒಡೆದು ಹಾಕಿದ್ದು, ಈ ಕೆರೆಗಳಿಂದ ದಾರದಹಳ್ಳಿ, ಕೆಸವೊಳಲು ಮತ್ತು ಕೊಣಗೇರೆ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ತೋಟ, ಗದ್ದೆಗಳಿಗೆ ಜೀವನಾಡಿಯಾಗಿದ್ದು, ಇದೀಗ ಕೆರೆಗಳು ಬತ್ತಿಹೋಗಿದ್ದರಿಂದ ನೀರಿಗಾಗಿ ಪರದಾಡುವಂತಾಗಿದೆ. ಇದರ ಬಗ್ಗೆ ವಿಚಾರಿಸಿದಾಗ ಒಡೆಯುವುದಷ್ಟೆ ನಮ್ಮ ಕೆಲಸ. ಕಟ್ಟುವುದು ನಮ್ಮದಲ್ಲವೆಂದು ಉಡಾಫೆ ಉತ್ತರ ನೀಡುವುದರೊಂದಿಗೆ ಕೆರೆ ಹೋಳೆತ್ತುವಿಕೆಯಲ್ಲಿಯೂ ಅಕ್ರಮನಡೆಸಿದ್ದಾರೆ ಎಂದು ಆರೋಪಿಸಿದ ಅವರು,  ಒಂದು ವಾರದೊಳಗೆ ಕೆರೆಯನ್ನು ದುರಸ್ತಿಪಡಿಸದಿದ್ದರೆ ಜಿಪಂ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
 ಈ ಸಂದರ್ಭದಲ್ಲಿ ಕೆ.ಎ. ವೇಣುಗೋಪಾಲ್, ಅಜಿತ್ ಕುಮಾರ್, ರಂಜನ್, ಕೆ.ಪಿ. ನಾರಾಯಣಾಚಾರ್, ವಿಜಯಕುಮಾರ್, ಸುಬ್ಬಯ್ಯ, ರವಿ, ಕೆಸವೊಳಲು ಪುಟ್ಟಸ್ವಾಮಿ, ರಮೇಶ್, ಕೆ.ಎಂ. ಕೇಶವ, ಗಣೇಶ ಸೇರಿದಂತೆ ಗ್ರಾಮಾಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement