ಹೆಚ್ಚುವರಿ ಶುಲ್ಕ: ಪ್ರತಿಭಟನೆ
ಕ.ಪ್ರ.ವಾರ್ತೆ \ ಶಿಕಾರಿಪುರ \ ಮಾ.19
ಕಾಲೇಜಿನ ಪ್ರಾಚಾರ್ಯರು ಹಾಗೂ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಡುವಿನ ಸಮನ್ವಯದ ಕೊರತೆಗೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು ಇದರಿಂದಾಗಿ ಪರೀಕ್ಷಾ ಶುಲ್ಕವನ್ನು ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷಾ ಶುಲ್ಕವಾಗಿ ರು. 125 ಪ್ರತಿ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದೆ. ಇದರೊಂದಿಗೆ ವಿ.ವಿ ಸುತ್ತೋಲೆಯ ನೆಪವೊಡ್ಡಿ ಪುನಃ ರು. 340 ವಸೂಲಿ ಮಾಡಿರುವ ಪ್ರಾಚಾರ್ಯರು ಹೆಚ್ಚುವರಿ ಹಣ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಂದಾಯವಾಗುವುದಾಗಿ ತಿಳಿಸಿದ್ದರೂ ಇದುವರೆಗೂ ಹಣ ವಾಪಸ್ ಬಂದಿರುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಡ ವಿದ್ಯಾರ್ಥಿಗಳ ಶೋಷಣೆ: ಇದೀಗ ಎರಡನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸುವ ಸಮಯವಾಗಿದೆ. ಪುನಃ ರು. 465 ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಇತರೆ ಹಿಂದುಳಿದ ವರ್ಗದ 2ಎ, 2ಬಿ, 3ಎ, 3ಬಿ ಸಹಿತ ಆದಾಯ ಮಿತಿ 45 ಸಾವಿರ ಮೀರಿರದ ವಿದ್ಯಾರ್ಥಿಗಳು ಕೇವಲ ರು. 125 ಮಾತ್ರ ಪರೀಕ್ಷಾ ಶುಲ್ಕ ಭರಿಸುವಂತೆ ಸರ್ಕಾರದ ಸ್ಪಷ್ಟ ನಿಯಮವಿದ್ದರೂ ಹೆಚ್ಚುವರಿ ಶುಲ್ಕ ಪಡೆಯುವ ಮೂಲಕ ಬಡ ವಿದ್ಯಾರ್ಥಿಗಳ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ದೂರಿದರು.
ಕುವೆಂಪು ವಿಶ್ವವಿದ್ಯಾಲಯ ಹಾಗೂ ಕಾಲೇಜು ಪ್ರಾಚಾರ್ಯರ ಮಧ್ಯೆಯ ಸಮನ್ವಯದ ಕೊರತೆ ಜತೆಗೆ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳ ಹಿತವನ್ನು ಬಲಿಕೊಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜಿನಲ್ಲಿ ಹೆಚ್ಚುವರಿ ಶುಲ್ಕ ಭರಿಸಲಾಗದೆ ಸಮಸ್ಯೆಯ ಜತೆಗೆ ಕಾಲೇಜು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಅನಿವಾರ್ಯ ಸಂದರ್ಭವನ್ನು ಹಲವು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಈ ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು, ಕುವೆಂಪು ವಿ.ವಿ ಮಧ್ಯೆ ಪ್ರವೇಶಿಸಿ ನ್ಯಾಯಯುತ ಶುಲ್ಕದ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವಂತೆ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮನವಿ ಮಾಡಿದರು. ಪ್ರತಿಭಟನೆಯ ನಂತರದಲ್ಲಿ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮಧು ಹುಲ್ಮಾರ್, ವಿನಯ್, ರವಿಕುಮಾರ್, ವಿವೇಕ್, ಅಣ್ಣಪ್ಪ, ದರ್ಶನ್, ಸ್ವಾತಿ, ಉಷಾ, ಲಕ್ಷ್ಮಿ, ಸುಜಾತ, ವಾಣಿ, ಚೈತ್ರ, ದಿವ್ಯ, ಸುಮಾ, ಭೂಮಿಕಾ ಮತ್ತಿತರರು ವಹಿಸಿದ್ದರು.