ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ.20
ತಾಲೂಕಿನ ಮರ್ಲೆ ಗ್ರಾಮದಲ್ಲಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಮರ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಮರ್ಲೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು, ಇಲ್ಲಿನ ರೈತರು ಅಲ್ಪಸ್ವಲ್ಪ ಭೂಮಿಯನ್ನು ಹೊಂದಿದ್ದು, ಜೀವನಕ್ಕೆ ದಿನಗೂಲಿಯನ್ನು ಅವಲಂಬಿಸಿದ್ದಾರೆ. ಇಲ್ಲಿನ ಸರ್ವೆ ನಂಬರ್ 134ರಲ್ಲಿ ಗೋಮಾಳ ಪ್ರದೇಶವಿದ್ದು, ಇದರ ವಿಸ್ತೀರ್ಣ 415 ಎಕರೆ. ಇಲ್ಲಿನ ಜಾನುವಾರುಗಳಿಗೆ ಮೇವಿಗೆ ಈ ಪ್ರದೇಶ ಅನುಕೂಲಕರವಾಗಿದ್ದು, ಇದೇ ಜಾಗದಲ್ಲಿ ಸಶ್ಮಾನವೂ ಸಹ ಇದೆ. ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತುಂಬಾ ಅನಾನೂಕೂಲವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಇದರ ಜತೆಗೆ ಜಿಲ್ಲೆಯ ಎಲ್ಲಾ ಜಲ್ಲಿ ಕ್ರಷರ್‌ಗಳನ್ನು ಇದೇ ಜಾಗದಲ್ಲಿ ಸ್ಥಾಪಿಸುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಶಿವಕುಮಾರ್, ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.