ಕೃಷಿ ಗುತ್ತಿಗೆದಾರರಿಗೆ ಕಡಿವಾಣ ಅಗತ್ಯ
ಕ.ಪ್ರ ವಾರ್ತೆ,ತರೀಕೆರೆ,ಮಾ.20
ಹೊರ ರಾಜ್ಯಗಳ ಬಂಡವಾಳಷಾಹಿ ಕೃಷಿ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ನಿಯಮಿತ ಮತ್ತು ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳಿ ನಿರ್ದೇಶಕ ಆರ್. ದೇವಾನಂದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಇಂದು ರಾಜ್ಯ ರೈತರ ಭೂಮಿ ಪ್ರತ್ಯಕ್ಷ, ಪರೋಕ್ಷವಾಗಿ ಹೊರ ರಾಜ್ಯಗಳ ಬಂಡವಾಳಷಾಹಿ ಗುತ್ತಿಗೆ ಬೆಳೆಗಾರರ ಪಾಲಾಗಿ ನಮ್ಮವರು ತಮ್ಮ ಹೊಲ ಗದ್ದೆಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಕೇರಳ ಮೂಲ: ಮಲೆನಾಡು ಮತ್ತು ಮೈಸೂರು ಭಾಗದಲ್ಲಿ ಕೇರಳ ರಾಜ್ಯ ಮೂಲದ ಗುತ್ತಿಗೆ ಬೆಳೆಗಾರರು ಶುಂಠಿ ಮತ್ತು ರಬ್ಬರ್ ಬೆಳೆ ಬೆಳೆಯಲು ಧಾವಂತದಿಂದ ರೈತರ ಭೂಮಿಯನ್ನು ಹಣದ ಆಮಿಶ ತೋರಿಸಿ ಆಕ್ರಮಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಆಂಧ್ರ ಮೂಲದ ಬಂಡವಾಳಷಾಹಿ ಕೃಷಿ ಗುತ್ತಿಗೆದಾರರು ತುಂಗಭದ್ರಾ ಕಾಡಾ ಪ್ರದೇಶದ ಹಾಗೂ ಭದ್ರಾ ಕಾಡಾ ಪ್ರದೇಶದಲ್ಲಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ವಿನಾಶಕಾರಿ ಔಷಧಿಗಳು ಬಾವಿ, ಕೆರೆ, ತೊರೆ ಹಳ್ಳ ಕೊಳ್ಳ ಸೇರಿಕೊಂಡು ನೀರಿನ ಜೊತೆ ಬೆರೆತು ಸಕಲ ಜೀವ ರಾಶಿಗಳಿಗೂ ಮರಣಾಂತಿಕವಾಗಿ ಪರಿಣಮಿಸುತ್ತದೆ. ಆದ್ದರಿಂದ ನಮ್ಮ ರೈತರು ತಮ್ಮ ಭೂಮಿಯನ್ನು ಇತರೆ ರಾಜ್ಯದವರಿಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಮತ್ತು ತಾವೇ ಕೃಷಿ ಮಾಡಬೇಕು ಎಂದು ಅವರು ತಿಳಿಸಿದ್ದು ನಮ್ಮ ರಾಜ್ಯ ಸರ್ಕಾರವೂ ಸಹ ಈ ಹೊರ ರಾಜ್ಯಗಳ ಬಂಡವಾಳಷಾಹಿ ಕೃಷಿ ಗುತ್ತಿಗೆದಾರರಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದಾರೆ.