'ಗ್ರಾಪಂ ವ್ಯಾಪ್ತಿಯಲ್ಲಿ ಉಳಿತಾಯ ಖಾತೆ ಮೇಳ ನಡೆಸಿ'
ಕ.ಪ್ರ.ವಾರ್ತೆ,ತರೀಕೆರೆ, ಮಾ.20
ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಉಳಿತಾಯ ಖಾತೆ ತೆರೆಯುವ ಮೇಳ ನಡೆಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ
ಗಂಗಾಧರಮೂರ್ತಿ ತಿಳಿಸಿದ್ದಾರೆ.
ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತರೀಕೆರೆ ಶಾಖೆ ವತಿಯಿಂದ ಸಮೀಪದ ಕೋರನಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ಎಲ್ಲ ಗ್ರಾಮಸ್ಥರಿಗೂ ಉಚಿತವಾಗಿ ಯಾವುದೇ ಠೇವಣಿ ಖರ್ಚಿಲ್ಲದೆ ಉಳಿತಾಯ ಖಾತೆ ತೆರೆಯುವ ಮೇಳದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಡ್ಡಾಯ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೈಯಕ್ತಿಕವಾಗಿ ಗ್ರಾಮಕ್ಕೆ ಬಂದು ಖಾತೆ ಮೇಳ ಮಾಡುತ್ತಿರುವುದು ಸಂತೋಷದ ವಿಷಯ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉಳಿತಾಯ ಖಾತೆ ತೆರೆಯುವುದನ್ನು ಕಡ್ಡಾಯ ಗೊಳಿಸಿದೆ. ಇದೀಗ ಬ್ಯಾಂಕ್ನಲ್ಲಿ ಖಾತೆ ತೆರೆಯುವುದು ಸುಲಭವಾಗಿದೆ, ಉಳಿತಾಯ ಖಾತೆ ತೆರೆಯುವುದರಿಂದ ವಿವಿಧ ಯೋಜನೆಗಳ ಉಪಯೋಗವನ್ನು ಪಡೆಯಬಹುದು ಎಂದು ತಿಳಿಸಿದರು.
ತರೀಕೆರೆ ಶಾಖೆ ಪ್ರಧಾನ ವ್ಯವಸ್ಥಾಪಕ ಶಿವನಾಗಪ್ಪ ಮಾತನಾಡಿ, ಬ್ಯಾಂಕ್ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಗ್ರಾಹಕರ ಮನೆ ಬಾಗಿಲಿಗೆ ಬಂದು ಉಳಿತಾಯ ಖಾತೆ ತೆರೆಯುವ ಮೇಳವನ್ನು ಪ್ರಾರಂಭಿಸಿದೆ. ಇಡೀ ದಿನ ಉಳಿತಾಯ ಖಾತೆಯನ್ನು ತೆರೆಯುವ ಕಾರ್ಯ ನಿರ್ವಹಿಸಲಾಗುವುದು. ಎಲ್ಲರೂ ಇದರ ಉಪಯೋಗವನ್ನು ಪಡೆಯಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕೆ.ಎನ್. ಉಮಾಪತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ. ಪಿಡಿಒ ಕುಮಾರಸ್ವಾಮಿ ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳ ತಿಮ್ಮಾಬೋವಿ, ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ವೈಭವ್, ಜೈಕಿರಣ್, ಎಂ.ಆರ್. ಹೆಗಡೆ, ಧನಂಜಯ, ನಾಗಪ್ಪ, ಗ್ರಾಮಸ್ಥರು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. 165 ಉಳಿತಾಯ ಖಾತೆಗಳನ್ನು ತೆರೆಯಲಾಯಿತೆಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶಿವನಾಗಪ್ಪ ತಿಳಿಸಿದ್ದಾರೆ.