ನೀರಿನ ಸಮಸ್ಯೆ ಬಗೆಹರಿಸಿ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ.20
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಸ್. ಬಸವರಾಜ್ ಸೂಚನೆ ನೀಡಿದ್ದಾರೆ.
ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕಾಲದಲ್ಲಿ ಮಳೆ ಇಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಕೆಲವು ಕಡೆಗಳಲ್ಲಿ ಬೋರ್‌ವೆಲ್‌ಗಳು ಕೆಟ್ಟು ಹೋಗಿವೆ. ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ನಿರಂತರವಾಗಿ ಭೇಟಿ ನೀಡಿ, ಪರ್ಯಾಯ ವ್ಯವಸ್ಥೆಯ ಮೂಲಕ ಕುಡಿಯುವ ನೀರು ಒದಗಿಸಬೇಕು ಎಂದು ಹೇಳಿದರು.
ಒಟ್ಟಾಗಿ ಶ್ರಮಿಸಿ: ವಿವಿಧ ಇಲಾಖೆಯ ವಾರ್ಷಿಕ ಪ್ರಗತಿಯ ಬಗ್ಗೆ ಪರಿಶೀಲಿಸಿದ ಅವರು ಪ್ರಸಕ್ತ ಸಾಲಿನ ಗುರಿಯನ್ನು ಮುಟ್ಟಲಾಗಿದೆ. ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅದರ ಉದ್ದೇಶ ಈಡೇರಿಕೆಗೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣವೇ ಬೋರ್‌ವೆಲ್ ಹಾಕಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಮೆಸ್ಕಾಂ ಇಲಾಖೆಯವರು ವಿದ್ಯುತನ್ನು ಹೆಚ್ಚಿನ ಸಮಯ ನೀಡಬೇಕು ಎಂದರು.
ಕ್ರಮಕ್ಕೆ ಸೂಚನೆ: ತಾಪಂ ಉಪಾಧ್ಯಕ್ಷ ಪುಟ್ಟೇಗೌಡ ಮಾತನಾಡಿ, ಹಂಪಾಪುರ, ಬೀಕನಹಳ್ಳಿ ನವಗ್ರಾಮಕ್ಕೆ 18 ಲಕ್ಷ ವೆಚ್ಚದಲ್ಲಿ ಓವರ್ ಟ್ಯಾಂಕ್ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಗ್ಯಾಸ್ ವಿತರಕರು ಸರಿಯಾದ ರೀತಿಯಲ್ಲಿ ಗ್ಯಾಸ್ ವಿತರಿಸುತ್ತಿಲ್ಲ, ಜೊತೆಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಅವರ ವಿರುದ್ಧ ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಅಧ್ಯಕ್ಷರಾದ ಕನಕರಾಜ್, ಮಂಜುನಾಥ್, ಮೀನಾಕ್ಷಿ ಧರ್ಮಯ್ಯ, ಸಿಇಒ ಮೃತ್ಯುಂಜಯ ಹಾಗೂ ಇತರೆ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.