ಬೂಟಾಟಿಕೆ ಧರಣಿ: ಬಿಜೆಪಿ ಆರೋಪ
ಕ.ಪ್ರ.ವಾರ್ತೆ,ಕೊಪ್ಪ, ಮಾ.20
ಇದುವರೆಗೂ ಗೋರಕ್ ಸಿಂಗ್ ವರದಿ ಬಗ್ಗೆ ಚಕಾರವೆತ್ತದ ಕೊಪ್ಪ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕೇಂದ್ರದ ಬಜೆಟ್ ಮುಗಿದ ನಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದು ಬೂಟಾಟಿಕೆಯ ಧರಣಿ ಸತ್ಯಾಗ್ರಹವಾಗಿದೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಸ್ವಾಮಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ ಇಲ್ಲಿನ ರೈತ ಸಂಘದ ನಾಯಕರು, ಈಗ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತುತ್ತಿರುವುದು ನಗೆಪಾಟಲೀಗೀಡಾಗಿದೆ ಎಂದರು.
ಗೋರಕ್ ಸಿಂಗ್ ಸಮಿತಿ ನೇಮಿಸಿದ್ದು, ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸುವ ಹೊಣೆಯೂ ಕೇಂದ್ರ ಸರ್ಕಾರದ್ದಾಗಿದೆ. ರು. 1,400 ಕೋಟಿ ಕೊಟ್ಟು ಸಾಲಾಮನ್ನಾ ಮಾಡುವುದಾಗಿ ಭರವಸೆ ನೀಡಿದ್ದು, ಕೇಂದ್ರ ಸಚಿವರುಗಳು. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಗೋರಕ್ ಸಿಂಗ್ ವರದಿಯನ್ನು ಜಾರಿಗೊಳಿಸಿ, ಸಂತ್ರಸ್ಥ ರೈತರ ಸಾಲಮನ್ನಾ ಮಾಡಬೇಕು ಎಂದು ಬಿಜೆಪಿ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.