ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಥೋತ್ಸವದ ಅಂಗವಾಗಿ ಪಡಿ ವಿತರಣೆ

Lingaraj Badiger
Updated On : 21 Mar 2013, 11:13 am

ಕ.ಪ್ರ ವಾರ್ತೆ,ಚಿಕ್ಕಮಗಳೂರು,ಮಾ. 20
ಪುರಾಣ, ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರಸ್ವಾಮಿ ರಥೋತ್ಸವದ ಅಂಗವಾಗಿ ಬುಧವಾರ ಹಿರೇಮಗಳೂರಿನಲ್ಲಿ ನಡೆದ ಬಡಾವಣೆಯ ವಿವಿಧ ದೇವಾಲಯಗಳಿಗೆ ಪಡಿಯನ್ನು ವಿತರಿಸುವುದರೊಂದಿಗೆ ಜಾತ್ರೆಗೆ ಆಹ್ವಾನಿಸುವ ವಿಶಿಷ್ಟ ಕಾರ್ಯಕ್ರಮ ಸಾಮರಸ್ಯ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.
ತೇರು ಹಬ್ಬದ ಅಂಗವಾಗಿ ಹಲವು ವರ್ಷಗಳಿಂದ ಗ್ರಾಮದ ಎಲ್ಲಾ ದೇವಾಲಯಗಳಿಗೆ ಪಡಿಯನ್ನು ನೀಡುವ ಮೂಲಕ ಜಾತ್ರೆಗೆ ಆಹ್ವಾನವನ್ನು ನೀಡಲಾಯಿತು. ಆಗಮ ವಿದ್ವಾಂಸ ಸವ್ಯಸಾಚಿಸ್ವಾಮಿಗಳ ಮಾರ್ಗದರ್ಶನ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಗೋಪಾಲಕೃಷ್ಣರ ಉತ್ಸವಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೋದಂಡರಾಮಚಂದ್ರಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ದಲಿತರ ಕಾಲೋನಿ, ದೊಡ್ಡಬೀದಿ, ದೇವಾಲಯ ಮುಖ್ಯ ಬೀದಿಯಲ್ಲಿ ಸಾಗಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ  ಬಿಡಿಸುವ ಮೂಲಕ ಆರತಿ ಬೆಳಗಿ, ಇಡುಗಾಯಿ ಹೊಡೆದು ಮೆರವಣಿಗೆ ಸ್ವಾಗತಿಸಿ ಬೀಳ್ಕೊಡುತ್ತಿದ್ದರು.
ದಲಿತರ ಬೀದಿಯಲ್ಲಿ ಚಿಕ್ಕಮ್ಮ ದೇವಾಲಯದಲ್ಲಿ ಅರ್ಚಕ ರಂಗಾಳಯ್ಯ ಅವರಿಗೆ ಕೋದಂಡರಾಮಚಂದ್ರಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು ಶಾಲು ಹೊದಿಸಿ, ಪಡಿಯನ್ನು ನೀಡಿ ಗೌರವಿಸಿದರು.
ಪಡಿಯನ್ನು ನೀಡಲಾಯಿತು: ಮಾಸ್ತಮ್ಮ ದೇವಾಲಯದ ಪರವಾಗಿ ಹಿರಿಯ ಪುಟ್ಟಸ್ವಾಮಿ, ಶನೈಶ್ಚರಸ್ವಾಮಿ ದೇವಾಲಯದ ಪರವಾಗಿ ವ್ಯವಸ್ಥಾಪಕ ಜಾನಯ್ಯ ಅವರ ಪುತ್ರಿ ಅವರಿಗೆ ಪಡಿಯನ್ನು ನೀಡಲಾಯಿತು. ಗ್ರಾಮ ದೇವತೆ ಮುತ್ತಿನಮ್ಮ ದೇವಾಲಯದಲ್ಲಿ ವ್ಯವಸ್ಥಾಪಕ ಎಚ್.ಎಸ್. ಮಲ್ಲೇಶ್ ಅವರು ನೀರು ಸಂಪ್ರೋಕ್ಷಣೆ ಮೂಲಕ ಮೆರವಣಿಗೆ ಸ್ವಾಗತಿಸಿಕೊಂಡರು.
ರಾಮನ ಗುಡಿ ಪರವಾಗಿ ಶಲ್ಯವನ್ನು ಹೊದಿಸಿ ಪಡಿಯನ್ನು ನೀಡಿ ಗೌರವಿಸಲಾಯಿತು. ಕೆಂಚರಾಯನ ಗುಡಿಗೂ ಪಡಿಯನ್ನು ವಿತರಿಸಲಾಯಿತು. ಮುತ್ತಿನಮ್ಮ ದೇವಾಲಯ ಬೀದಿಯ ಶನೈಶ್ಚರಸ್ವಾಮಿ ದೇವಾಲಯಕ್ಕೆ ಭಾಗ್ಯಮ್ಮ ಅವರಿಗೆ ಪಡಿಯನ್ನು ನೀಡಲಾಯಿತು.
ಸಾಮರಸ್ಯ ಸಂದೇಶ: ಕರಾಳಮ್ಮ, ಪ್ಲೇಗಿನಮ್ಮ ಅಂತರಘಟ್ಟಮ್ಮ ದೇವಾಲಯದ ಮುಖ್ಯಸ್ಥರಾದ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಪಡಿಯನ್ನು ನೀಡುವ ಮೂಲಕ ಗೌರವಿಸಿ ಆಹ್ವಾನ ನೀಡಲಾಯಿತು.
ಗಣಪತಿ ದೇವಾಲಯದಲ್ಲಿ ಮುಖ್ಯಸ್ಥ ಬಿ.ಎನ್. ಮೋಹನ್‌ಕುಮಾರ್ ಅವರಿಗೆ ಪಡಿ ನೀಡಲಾಯಿತು. ಪಾತಾಳ ಮಲ್ಲಿಕಾರ್ಜುನಸ್ವಾಮಿ, ಈಶ್ವರ ದೇವಾಲಯಕ್ಕೂ ಪಡಿಯನ್ನು ನೀಡಲಾಯಿತು.
ಜಾತಿ ಮತ ಪಂಥ ವರ್ಗವಿಲ್ಲದೆ ಎಲ್ಲಾ ದೇವಾಲಯಗಳಿಗೆ ಪಡಿಯನ್ನು ನೀಡಿ ಜಾತ್ರೆಗೆ ಆಹ್ವಾನಿಸುವ ಈ ಕಾರ್ಯಕ್ರಮ ಜನರಿಗೆ ಸಾಮರಸ್ಯ ಸಂದೇಶವನ್ನು ನೀಡುವಲ್ಲಿ ಸಫಲವಾಯಿತು. ದಲಿತರ ಕಾಲೋನಿಯಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಜನ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಾಮರಸ್ಯದ ಸಂಕೇತವಾಗಿ ನಡೆದುಕೊಂಡು ಬರುತ್ತಿರುವ ಪಡಿ ನೀಡುವ ಕಾರ್ಯಕ್ರಮ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಇಂಥಾ ಪದ್ಧತಿ ಎಲ್ಲಾ ಕಡೆ ನಡೆದರೆ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ ಎಂದು ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದರು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ವಿ. ಚೂಡನಾಥ ಅಯ್ಯರ್, ಸದಸ್ಯರಾದ ಬಿ.ಎನ್. ಮೋಹನ್‌ಕುಮಾರ್, ಎಚ್.ಸಿ. ಗಂಗಾಧರ, ಎಂ.ಎಸ್. ಗಿರಿಧರ ಯತೀಶ್, ಜಿಲ್ಲಾ ನಿವೃತ್ತ ನೌಕರರ ಸಂಘ ಅಧ್ಯಕ್ಷ ಗಂಗಾಧರ್, ಹಿರಿಯ ಮುಖಂಡ ಎಚ್.ಆರ್. ಚಂದ್ರಪ್ಪ, ಪುಟ್ಟಸ್ವಾಮಿ, ಎಚ್.ಎಸ್. ಶಿವಕುಮಾರ್, ಎಚ್.ಎಸ್. ರವಿಕುಮಾರ್, ಎಚ್.ಕೆ. ಸೋಮಶೇಖರ್, ಸ್ವಾಮಿ, ನಾಡಿನ ವಿವಿಧ ಕಡೆಗಳಿಂದ ಆಗಮಿಸಿರುವ ಪೆರುಮಾಳ್, ಗೋವಿಂದರಾಜುಭಟ್ಟ, ಶ್ರೀನಿವಾಸಭಟ್ಟ, ಮೋಹನ್ ಭಾರ್ಗವ, ಕೃಷ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಗುರುವಾರ ಬ್ರಹ್ಮ ರಥೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement