ಮುಗಿದ ಜೀವನ ಪಾಠ
ಚಳ್ಳಕೆರೆ: ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ, ತತ್ವಜ್ಞಾನಿ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ, ಶ್ವೇತವಸ್ತ್ರಧಾರಿ, ನಡೆದಾಡುವ ಸಂತ ಎನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಯವರ ನಿಧನ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಆಘಾತ ಉಂಟು ಮಾಡಿದೆ.
ಬೆಂಗಳೂರಿನಿಂದ ಶನಿವಾರ ಮಧ್ಯಾಹ್ನ 4.45ಕ್ಕೆ ಚಳ್ಳಕೆರೆಗೆ ಆಗಮಿಸಿದ ಇವರ ಪಾರ್ಥಿವ ಶರೀರವನ್ನು ಇಲ್ಲಿನ ಪುರಸಭೆಯ ಕಚೇರಿಯ ಮುಂಭಾಗದಲ್ಲಿ ಕೆಲವು ಗಂಟೆಗೆಳ ಕಾಲ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು.
ಸಾರ್ವಜನಿಕ ದರ್ಶನ: ಸುಮಾರು ಸಾವಿರಕ್ಕೂ ಹೆಚ್ಚು ಜನರು ಇವರ ಅಂತಿಮ ದರ್ಶನ ಪಡೆದರು. ಜಿಲ್ಲಾಡಳಿತದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ನೀಲಮ್ಮ, ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಅಂತಿಮ ನಮನ ಸಮರ್ಪಿಸಿದರು. ಮುಖ್ಯಾಧಿಕಾರಿ ಐ. ಬಸವರಾಜು ಮತ್ತು ಆಡಳಿತ ವರ್ಗ ಸೂಕ್ತ ವ್ಯವಸ್ಥೆ ಮಾಡಿದ್ದರು.
ಮಾಜಿ ಶಾಸಕ ತಿಪ್ಪೇಸ್ವಾಮಿ ಮೃತರಿಗೆ ಅಂತಿಮ ಗೌರವ ಸಲ್ಲಿಸಿದ ನಂತರ ಮಾತನಾಡಿ, ತಾಲೂಕಿನ ಹಿರಿಯ ಚೇತನ ಇನ್ನಿಲ್ಲವಾಗಿದೆ. ಇಂತಹ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದ್ದು ಮನಸ್ಸಿಗೆ ದುಖ ತಂದಿದೆ ಎಂದರು.
ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಕಬೀರಾನಂದ ಸ್ವಾಮಿಗಳು, ಸಾಹಿತಿ ಬಿ.ಎಲ್. ವೇಣು, ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ತಾಲೂಕು ಕಸಾಪ ಗೌರವಾಧ್ಯಕ್ಷ ಪಿ. ತಿಪ್ಪೇಸ್ವಾಮಿ, ಅಧ್ಯಕ್ಷ ಪಿ. ಜಗದೀಶ್, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಮೂರ್ತಿ, ಬಿಇಒ ಡಿ.ಕೆ. ತಿಮ್ಮಣ್ಣ, ಕರವೇ ತಾ. ಅಧ್ಯಕ್ಷ ಟಿ.ಜೆ. ವೆಂಕಟೇಶ್, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಟಿ.ಜೆ. ತಿಪ್ಪೇಸ್ವಾಮಿ, ಪುರಸಭಾ ಸದಸ್ಯ ಪೊಲೀಸ್ ಈರಣ್ಣ, ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಎಂ. ಚೇತನ ಕುಮಾರ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಎಸ್. ಗುಂಡೂರಾವ್, ಗೌರವಾಧ್ಯಕ್ಷ ಎಂ. ವಾಸುದೇವರಾವ್, ನಾರಾಯಣಪುರ ಶಾಲೆಯ ಟ್ರಸ್ಟ್ ನಿರ್ದೇಶಕ ಮಾ.ಕಂ. ಶ್ರೀನಿವಾಸಲು, ಜೆಡಿಎಸ್ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ತಾಪಂ ಅಧ್ಯಕ್ಷ ಚಿದಾನಂದ ಮುಂತಾದವರು ಅಂತಿಮ ದರ್ಶನ ಪಡೆದರು.
ಇಂದು ಅಂತ್ಯ ಸಂಸ್ಕಾರ: ಸಂಜೆ ಇಲ್ಲಿಂದ 6.30ಕ್ಕೆ ಬೆಳಗೆರೆಗೆ ಪಾರ್ಥಿವ ಶರೀರವನ್ನು ಕೊಂಡೂಯ್ಯಲಾಗಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಶಾಸ್ತ್ರೀಜಿಯವರ ಕುಟುಂಬದ ನಿಕಟ ವರ್ತಿಗಳಾದ ಡಾ. ವೆಂಕಟೇಶ್ ಶರ್ಮ, ಅವರ ಮೊಮ್ಮಗ ಪ್ರಕಾಶ್ ಇದ್ದರು.