ಕೆ.ಎಂ.ರಸ್ತೆ ಕಾಮಗಾರಿ ವಿಳಂಬಕ್ಕೆ ಖಂಡನೆ
ಮೂಡಿಗೆರೆ: ಪಟ್ಟಣದ ಗಂಗನಮಕ್ಕಿ ಬಳಿ ಕೆ.ಎಂ.ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಆದಷ್ಟು ಬೇಗನೇ ಮುಕ್ತಾಯಗೊಳಿಸದೆ ಗುತ್ತಿಗೆದಾರರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯ ಮುಖಂಡರಾದ ಬಿ.ಸಿ. ದಯಾಕರ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮುಂಬರುವ ಎರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಈ ರಸ್ತೆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ರಾಜ್ಯ ಹೆದ್ದಾರಿ ಇದಾಗಿದ್ದು, ಪ್ರತಿ ನಿತ್ಯ 100 ಕ್ಕೂ ಅಧಿಕ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಕಾಲವಾದ್ದರಿಂದ ರಸ್ತೆ ಕಾಮಗಾರಿ ವೇಳೆ ವಿಪರೀತ ಧೂಳು ಮೇಲೇಳುತ್ತಿದೆ. ರಸ್ತೆ ಮೇಲೆ ಜಲ್ಲಿ, ಮರಳು ಸಂಗ್ರಹಿಸುತ್ತಿರುವುದರಿಂದ ತೊಂದರೆ ಎದುರಾಗಿದೆ. ಆದ್ದರಿಂದ ಇನ್ನೊಂದು ಜಲ್ಲಿ ತಿರುಗಿಸುವ ಯಂತ್ರವನ್ನು ತಂದು ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ. ಸೋಮೇಗೌಡ, ಜೆಡಿಎಸ್ ವಸ್ತಾರೆಯ ಬಿ.ವಿ. ನವೀನ್, ಕೆಜೆಪಿಯ ಬಿ.ಆರ್. ಸುಧೀರ್, ಇಂತಿಯಾಜ್ ಅಹ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.