ಕ್ರೀಡಾಂಗಣದಲ್ಲಿ ತಲೆ ಎತ್ತಿರುವ ಕಟ್ಟಡಗಳು
ಆರ್. ತಾರಾನಾಥ್
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮಾ.25
ನೋಡಲು ಇದೊಂದು ಕ್ರೀಡಾಂಗಣ, ಆದರೆ, ಇದು, ಕಟ್ಟಡಗಳ ಸಮುಚ್ಚಯ ಕೇಂದ್ರವಾಗಿದೆ.
ಇಲ್ಲಿ ಹೇಳಲು ಹೊರಟಿರುವುದು ಜಿಲ್ಲೆಯ ಯಾವುದೋ ಒಂದು ತಾಲೂಕು ಕ್ರೀಡಾಂಗಣದ ಕತೆಯಲ್ಲ. ಜಿಲ್ಲೆಯ ಆಡಳಿತ ಕೇಂದ್ರ ಕಚೇರಿ ಇರುವ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಜಿಲ್ಲಾ ಆಟದ ಮೈದಾನದ ಕತೆ.
ದಶಕಗಳಷ್ಟು ಹಳೆಯದು: ಇದು, ನಿರ್ಮಾಣವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಲ್ಲ. ಹಲವು ದಶಕಗಳ ಹಿಂದೆಯೇ ನಿರ್ಮಾಣ ಮಾಡಲಾಗಿರುವ ಇಲ್ಲಿನ ಜಿಲ್ಲಾ ಆಟದ ಮೈದಾನ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವದಂತಹ ರಾಷ್ಟ್ರೀಯ ದಿನಾಚರಣೆಗಳಿಗೆ ಮಾತ್ರ ಸೀಮಿತವಾಗಿದೆ. ಇದರ ಜತೆಗೆ ವರ್ಷಕ್ಕೆ ಒಂದೆರಡು ಬಾರಿ ರಾಜಕೀಯ ಪಕ್ಷಗಳ ಜಿಲ್ಲಾ ಸಮಾವೇಶಗಳು ಇಲ್ಲಿ ನಡೆಯುತ್ತಿವೆ. ಜಾಗದ ಕೊರತೆಯಿಂದಾಗಿ ಜಿಲ್ಲಾ ಹಾಗೂ ದಸರಾ ಕ್ರೀಡಾಕೂಟಗಳು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿವೆ.
ಸದಾ ಕಣ್ಣಿಗೆ ಕಾಣುವ ಇಲ್ಲಿನ ಜಿಲ್ಲಾ ಆಟದ ಮೈದಾನದ ಅಭಿವೃದ್ಧಿಗೆ ಉತ್ತೇಜನ ನೀಡಬೇಕಾದ ಆಡಳಿತ ಯಂತ್ರ ಮೊದಲಿನಿಂದಲೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದಕ್ಕೆ ಎಂಟ್ರಿಯಾಗುವ ಗೇಟ್ ಯಾವಾಗಲೂ ತೆರೆದಿರುತ್ತದೆ. ಇನ್ನು ಮೂರು ಕಡೆಗಳಲ್ಲಿ ಒಳ ಬರಲು ದಾರಿ ಇದ್ದು, ಯಾವ ವೇಳೆಯಲ್ಲಾದರೂ ಯಾರೂ ಬೇಕಾದರೆ ಒಳಗೆ ಬಂದು ಹೋಗಬಹುದಾಗಿದೆ.
ಕಟ್ಟಡ ಬಾಡಿಗೆಗೆ: ಕ್ರೀಡಾಂಗಣದ ಒಳ ಭಾಗದಲ್ಲಿ ಒಂದೊಂದಾಗಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಕೆಲವು ಕಟ್ಟಡಗಳು ಸರ್ಕಾರಿ ಇಲಾಖೆಯವರೆ ಬಳಸಿಕೊಳ್ಳುತ್ತಿದ್ದರೆ, ಇಲ್ಲೇ ಇರುವ ಸಂಸ್ಥೆಯೊಂದರ ಕಟ್ಟಡ ಬಾಡಿಗೆಗೆ ನೀಡಲಾಗಿದೆ. ಅಂದರೆ ಸರ್ಕಾರಿ ಜಾಗದಲ್ಲಿ ಉಚಿತವಾಗಿ ಜಾಗ ಪಡೆದು, ಅಲ್ಲಿ ಕಟ್ಟಡ ನಿರ್ಮಾಣ ಮಾಡಿ, ಅದನ್ನು ಬಾಡಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಇನ್ನುಳಿದಂತೆ ಇಲ್ಲಿರುವ ಕೆಲವು ಕಟ್ಟಡಗಳನ್ನು ಇಲಾಖೆಯವರು ಸಹ ಬಳಸಿಕೊಳ್ಳುತ್ತಿಲ್ಲ.
ಸಾಲು ಗಟ್ಟಿ ನಿಂತಿರುವ ಕಟ್ಟಡಗಳಲ್ಲಿ ಒಂದರ ಮೇಲೊಂದರಂತೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ಹಾವಳಿ ಇದೇ ರೀತಿಯಲ್ಲಿ ಮುಂದುವರಿದರೆ, ಜಿಲ್ಲಾ ಆಟದ ಮೈದಾನ ಸಂಪೂರ್ಣವಾಗಿ ಕಟ್ಟಡಗಳ ಸಮುಚ್ಚಯವಾಗಲಿದೆ.
ಇದಕ್ಕೆ ಕಡಿವಾಣ ಹಾಕಬೇಕಾಗಿರುವ ಅಧಿಕಾರಿಗಳು ತಮಗೇನೂ ಸಂಬಂಧ ಇಲ್ಲ ಎನ್ನುವಂತೆ ಮೌನವಾದರೆ, ಕ್ರೀಡೆಗಳ ಅಭ್ಯಾಸ ಮಾಡಲು ಮುಂದೊಂದು ದಿನ ಜಾಗವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ, ಅದನ್ನು ಪ್ರಶ್ನೆ ಮಾಡಲು ಆಗ ನಮ್ಮ ಎದುರಿಗೆ ಮೌನವಾಗಿರುವ ಅಧಿಕಾರಿಗಳು ಇರುವುದಿಲ್ಲ. ಆಟದ ಮೈದಾನ ಅದರ ಮೂಲ ಉದ್ದೇಶಕ್ಕೆ ಸೀಮಿತವಾಗಿರಬೇಕೇ ಹೊರತು ಕಟ್ಟಡಗಳ ನಿರ್ಮಾಣಕ್ಕೆ ಮೀಸಲಾಗಿಟ್ಟ ಖಾಲಿ ನಿವೇಶನ ಅಂದುಕೊಳ್ಳುವಂತಿರಬಾರದು.
ವೇದಿಕೆ ನಿರ್ಮಾಣ: ಜಿಲ್ಲಾ ಆಟದ ಮೈದಾನದಲ್ಲಿ ಸಾರ್ವಜನಿಕರ ಸಮಾರಂಭಕ್ಕಾಗಿ ಎತ್ತರವಾದ ವೇದಿಕೆ ಒಂದಿತ್ತು.
ನವೀನ್ರಾಜ್ ಸಿಂಗ್ ಅವರು ಜಿಲ್ಲಾಧಿಕಾರಿಗಳಾಗಿದ್ದಾಗ ಆ ವೇದಿಕೆಯನ್ನು ತೆರವುಗೊಳಿಸಿದರು. ಆಗ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಯವರು ಪ್ರತಿಭಟನೆ ನಡೆಸಿದರು. ಅದನ್ನು ಕಿವಿಗೆ ಹಾಕಿಕೊಳ್ಳದೆ ಆ ವೇದಿಕೆಯನ್ನು ತೆರವುಗೊಳಿಸಿ, ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಯಿತು.
ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆ ವೇದಿಕೆಯಲ್ಲಿ ನಡೆಸಿದರೆ ಗಣ್ಯರಿಗೆ ಬಿಸಿಲಿನ ಕಿರಿಕಿರಿ ಆಗುವುದಿಲ್ಲ ಎಂಬ ಸಮಾಜಾಯಿಸಿಗೆ ಕೊನೆಗೆ ರಾಜಕೀಯ ಪಕ್ಷದವರು ಸುಮ್ಮನಾದರು. ಆದರೆ, ಈ ವೇದಿಕೆ ನಿರ್ಮಾಣವಾದ ಮೇಲೆ ಒಂದೂ ರಾಷ್ಟ್ರೀಯ ಕಾರ್ಯಕ್ರಮವನ್ನು ಆ ವೇದಿಕೆಯಲ್ಲಿ ಮಾಡಿಲ್ಲ.
ಕ್ರೀಡಾ ಇಲಾಖೆಗೆ ಆದಾಯ ತಂದುಕೊಡುವ ಉದ್ದೇಶದಿಂದ ಜಿಲ್ಲಾ ಆಟದ ಮೈದಾನದಲ್ಲಿ ವಿದ್ಯುತ್ ಸಂಪರ್ಕ ವಿರುದ್ಧ ಜಾಹಿರಾತು ಫಲಕಗಳನ್ನು ಹಾಕಲಾಯಿತು. ಹೀಗೋ ಒಂದು ವರ್ಷಗಳ ಕಾಲ ಅವುಗಳಿಂದ ಆದಾಯ ಬಂದಿತು. ಆದರೆ, ನಂತರ ಜಾಹಿರಾತುದಾರರು ಮುಂದೆ ಬರಲಿಲ್ಲ. ಇವುಗಳ ನಿರ್ವಹಣೆಯನ್ನು ಕೈಬಿಟ್ಟಿದ್ದರಿಂದ ಸಂಪೂರ್ಣವಾಗಿ ಹಾಳಾಗಿ ಹೋಗಿವೆ.
ವಾಕಿಂಗ್ ಪಾತ್: ತರಬೇತಿ ದಾರರಿಲ್ಲದೆ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಯಿತು. ಇದು ಬೆಳಿಗ್ಗೆ ವಾಕ್ ಮಾಡುವವವರಿಗೆ ವಾಕಿಂಗ್ ಪಾತ್ ಆಗಿದೆ. ಇದು, ಸ್ಕೇಟಿಂಗ್ ಟ್ರ್ಯಾಕ್ ಎಂದು ತಿಳಿದಿದ್ದರೂ ಕೂಡ ಕೆಲವು ಮಂದಿ ಇದರ ಮೇಲೆಯೇ ವಾಕ್ ಮಾಡುತ್ತಿರುತ್ತಾರೆ. ಇನ್ನು ಕೆಲವರು ಇಲ್ಲೇ ಬ್ಯಾಡ್ಮಿಂಟನ್ ಆಟ ಆಡುತ್ತಿರುತ್ತಾರೆ. ಇವರಲ್ಲಿ ಹೆಚ್ಚಿನ ಮಂದಿ ವಿದ್ಯಾವಂತರೆ.
ಹೀಗೆ ಜಿಲ್ಲಾ ಆಟದ ಮೈದಾನ ಕ್ರೀಡೆಗಳಿಗಿಂತ ಅನ್ಯ ಕಾರ್ಯಕ್ಕೆ ಹೆಚ್ಚಿನ ಬಳಕೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಮೂಲ ಉದ್ದೇಶಕ್ಕೆ ಬಳಕೆ ಮಾಡಿದರೆ ಮೈದಾನಕ್ಕೊಂದು ಅರ್ಥ ಬರಲಿದೆ. ಈ ಕೆಲಸ ಆಡಳಿತ ಯಂತ್ರದಿಂದ ಆಗಬೇಕಾಗಿದೆ.