ನಾಳೆಯಿಂದಕುಸ್ತಿ ಪಂದ್ಯಾವಳಿ
ಬೀರೂರು: ಬೀರೂರು ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಇಲ್ಲಿನ ಶಿವಾಜಿ ವ್ಯಾಯಾಮ ಶಾಲೆ, ಪುರಸಭೆ ಮತ್ತು ಪಟ್ಟಣದ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಮಾ.27 ಮತ್ತು 28ರಂದು ಎರಡು ದಿನಗಳು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಕುಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಬೆಳ್ಳಿಗಧೆ, ಸಂಗೊಳ್ಳಿರಾಯಣ್ಣ ಪ್ರಶಸ್ತಿ, ಪುರಸಭೆ ಪೌರಪ್ರಶಸ್ತಿ, ಬಂಗಾರದ ಪದಕ, ಬೆಳ್ಳಿಕಪ್ ಸೇರಿದಂತೆ ಇನ್ನಿತರೆ ಬಹುಮಾನ ಪ್ರಶಸ್ತಿಗಳನ್ನು ವಿಜೇತರಿಗೆ ನೀಡಲಾಗುವುದು. ಪರಸ್ಥಳದಿಂದ ಬಂದು ಭಾಗವಹಿಸುವ ಕುಸ್ತಿಪಟುಗಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಕುಸ್ತಿ ಸಮಿತಿ ಸದಸ್ಯರಾದ ಜಿ. ಅನುರಾಧಾ, ಎಸ್. ಓಂಕಾರಮೂರ್ತಿ, ಮಾರ್ಗದ ಮಧು, ಬಿ.ಕೆ. ಮಂಜುನಾಥ್, ಬಿ.ಕೆ. ಶಶಿಧರ್ ತಿಳಿಸಿದ್ದಾರೆ.
ಪ್ರಸವ ಪೂರ್ವ ಲಿಂಗಪತ್ತೆ ನಿಷೇಧ ಕಾರ್ಯಾಗಾರ
ತರೀಕೆರೆ: ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ನ್ಯಾ. ಪ್ರಭು ಎನ್.ಬಡಿಗೇರ್ ಹೇಳಿದರು.
ಅವರು ಸೋಮವಾರ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸವ ಪೂರ್ವ ಲಿಂಗಪತ್ತೆ ನಿಷೇಧ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳು ಕುರಿತು ಆರೋಗ್ಯ ಸೇವಾ ವೃತ್ತಿ ಪರಿಣತರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಅಭಿಯೋಜಕ ಭಾಸ್ಕರ್ ಮಾತನಾಡಿ, ಕಾಯಿದೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಜನರೇ ಮುಂದೆ ನಿಂತು ಅದನ್ನು ಖಂಡಿಸಬೇಕು. ಭ್ರೂಣ ಹತ್ಯೆ ತಡೆಯಬೇಕು. ಹೊಟ್ಟೆಯಲ್ಲಿರುವ ಮಗುವಿಗೂ ಕಾನೂನು ಇದೆ ಎಂದು ತಿಳಿಸಿದರು. ವಕೀಲ ಎಸ್. ಸುರೇಶ್ಚಂದ್ರ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಭ್ರೂಣ ಹತ್ಯೆ ತಪ್ಪು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎನ್. ಶಿವಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ. ಗಣೇಶ್, ವಕೀಲ ತೇಜಮೂರ್ತಿ ಮೊದಲಾದವರು ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ್, ಡಾ. ಪ್ರಸನ್ನ ಕುಮಾರ್ ಸಣ್ಣಕ್ಕಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.