'ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು'
ಕ.ಪ್ರ.ವಾರ್ತೆ ಟಿ ಬೀರೂರು ಟಿ ಮಾ.25
ಪಟ್ಟಣದ ರಾಮ ಬನಶಂಕರಿ ದೇವಾಲಯದ ಆವರಣದಲ್ಲಿ ದೇವಾಂಗ ನೌಕರರ ಸಂಘದ ಉದ್ಘಾಟನಾ ಸಮಾರಂಭ ಮತ್ತು ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಂಘವನ್ನು ಉದ್ಘಾಟಿಸಿದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅರೇಕಲ್ ಕಾಂತರಾಜ್ ಮಾತನಾಡಿ, ಶಿಕ್ಷಕರು ಈ ದೇಶದ ಬೆನ್ನೆಲುಬು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಸಂಘದ ಸದಸ್ಯರು ಸಮಾಜದ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುವುದರ ಜೊತೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂಘದ ಪ್ರಗತಿ ಸಾಧ್ಯ ಎಂದರು.
ಸಂಘ ಬೆಳೆಯಲಿ: ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಮತ್ತು ಸಮಾಜದ ಉನ್ನತಿಗೆ ಕಾರಣೀಭೂತರಾಗಿ. ಬೀರೂರಿನ ಈ ದೇವಾಂಗ ನೌಕರರ ಸಂಘ ರಾಜ್ಯದಲ್ಲಿ ಉತ್ತಮ ಸಂಘವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಂಗ ಸಮಾಜದ ಅಧ್ಯಕ್ಷ ಎಲ್. ಕೃಷ್ಣಮೂರ್ತಿ ಮಾತನಾಡಿ, ಸಂಘ ಸಧೃಢವಾಗಿ ಬೆಳೆಯಬೇಕಾದರೆ ಆರ್ಥಿಕವಾಗಿ ಸಧೃಢವಾಗಬೇಕು. ಅರ್ಥಿಕ ಸಂಪತ್ತನ್ನು ಕ್ರೋಢೀಕರಿಸಿ ಬೆಳೆಸಬೇಕು. ಲೆಕ್ಕಪತ್ರಗಳ ನಿರ್ವಹಣೆ ಪಾರದರ್ಶಕವಾಗಿರಬೇಕು ಎಂದರು.
ದೇವಾಂಗ ನೌಕರರ ಸಂಘದ ಅಧ್ಯಕ್ಷ ದೈಹಿಕ ಶಿಕ್ಷಕ ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸ್ಥಾಪನೆ, ಉದ್ದೇಶ, ಸಂಘದಿಂದ ಸಮಾಜಕ್ಕೆ ದೊರಕಬಹುದಾದ ಸೌಲಭ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಸನ್ಮಾನ: ಪುರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಿ.ಆರ್. ಯತೀಶ್ರನ್ನು ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಯತೀಶ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಲೋಕೇಶಪ್ಪ, ಉಪಾಧ್ಯಕ್ಷ ವಾಸಪ್ಪ, ಕಾರ್ಯದರ್ಶಿ ಬಿ.ಟಿ. ಸುರೇಶಬಾಬು, ಕೋಶಾಧಿಕಾರಿ ಎಚ್. ಮಂಜುನಾಥ್,
ಸದಸ್ಯರಾದ ಶಿವಮೂರ್ತಿ, ವಿಜಯಕುಮಾರ್, ಶಿವಪುತ್ರಪ್ಪ, ಬಿ. ರಮೇಶ್, ಎನ್. ಮನಂಜಪ್ಪ, ಪ್ರಕಾಶ್, ರಘು, ಪುಷ್ಪಾವತಿ, ಮೀನಾಕ್ಷಮ್ಮ, ಈರಮ್ಮ, ಕೆ.ಜಿ. ಲೋಕೇಶ್, ಬಿ.ವೈ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೂರ್ತಿ ನಿರೂಪಿಸಿ, ಮಂಜುನಾಥ್ ವಂದಿಸಿದರು.