ಸ್ವಾರ್ಥಕ್ಕಾಗಿ ಪ್ರಕೃತಿ ನಾಶ; ಹಣ್ಣೆಮಠ ಶ್ರೀ
ಕ.ಪ್ರ.ವಾರ್ತೆ ಟಿ ನ.ರಾ. ಪುರ ಟಿ ಮಾ.25
ಮನುಷ್ಯ ಮಾತ್ರ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನಾಶ ಮಾಡುತ್ತಿದ್ದಾನೆ ಎಂದು ಅಜ್ಜಂಪುರದ ಹಣ್ಣೆಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಶೆಟ್ಟಿಕೊಪ್ಪದ ಸಿದ್ದೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮ ಜಾಗೃತಿ ಹಾಗೂ ಆಶೀರ್ವಚನ ನೀಡಿದರು.
ಮನುಷ್ಯನು ಬರೀ ಪ್ರಕೃತಿ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯನ್ನೂ ನಾಶ ಮಾಡುತ್ತಿದ್ದಾನೆ. ಭಾರತೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾದ ಸಂಸ್ಕೃತಿಯಾಗಿದ್ದು, ಮುಂದಿನ ಪೀಳಿಗೆಯವರು ಭಾರತೀಯ ಸಂಸ್ಕೃತಿ,ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಇ. ಕೃಷ್ಣಯ್ಯ, ದೇವಸ್ಥಾನದ ಅರ್ಚಕರಾದ ಆರ್. ಶಿವಾನಂದ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ಕಳಶಾರೋಹಣ ನೆರವೇರಿಸಿದರು. ಬೆಳಗ್ಗೆ ಧಾರ್ಮಿಕ ಕಾರ್ಯದ ನಂತರ ಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಮಹಾ ಮಂಗಳಾರತಿ ಮಾಡಲಾಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.