ಆಸ್ತಿ ಮಾಲೀಕರಿಗೆ ಸೂಚನೆ
ಶಿವಮೊಗ್ಗ: ಪ್ರಸಕ್ತ ಸಾಲಿನ ಆರ್ಥಿಕ ವರ್ಷವು ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಸಭಾ ವ್ಯಾಪ್ತಿಯಲ್ಲಿನ ಸಮಸ್ತ ಆಸ್ತಿಗಳ ಮಾಲೀಕರು ಮತ್ತು ಅನುಭೋಗದಾರರು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ಮಾರ್ಚ್ 31 ರೊಳಗಾಗಿ ಪಾವತಿಸುವಂತೆ ತಪ್ಪದಲ್ಲಿ ಅಂತಹ ತೆರಿಗೆ ಪಾವತಿಸದ ಆಸ್ತಿಗಳ ಮಾಲಿಕರ ಹೆಸರುಗಳನ್ನು ಹಂತಹಂತವಾಗಿ ಪ್ರಕಟಿಸಲಾಗುವುದಲ್ಲದೇ ಕರ್ನಾಟಕ ಪುರಸಭೆ ಕಾಯ್ದೆಯನ್ವಯ ಜಪ್ತಿಯಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ. 2012-13ನೇ ಸಾಲಿನಲ್ಲಿ ನಗರಸಭೆಗೆ ಆಸ್ತಿ ತೆರಿಗೆಯಿಂದ ಬರಬೇಕಾದ ಬಾಕಿ ಮೊತ್ತ 1 ಕೋಟಿ ಇರುತ್ತದೆ. ಇದರಲ್ಲಿ ಪ್ರಮುಖ ವಾಣಿಜ್ಯ ಕಟ್ಟಡಗಳು, ರೈಸ್ಮಿಲ್ಗಳು, ಕಲ್ಯಾಣ ಮಂದಿರ ಮತ್ತು ಚಿತ್ರಮಂದಿರಗಳಿಂದ ಬರಬೇಕಾದ ಬಾಕಿ 80 ಲಕ್ಷಗಳಷ್ಟಿರುತ್ತದೆ. ಅಂತೆಯೇ ಸುಮಾರು 1 ಕೋಟಿಗಳಷ್ಟು ನೀರಿನ ತೆರಿಗೆ ಬಾಕಿ ಇರುತ್ತದೆ. ಬಳಕೆದಾರರು ಕೂಡಲೇ ನೀರಿನ ತೆರಿಗೆಯನ್ನು ಮಾರ್ಚ್ 31 ರೊಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಮಳಿಗೆ ಬಾಡಿಗೆಗಳನ್ನು ಪಾವತಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.