ಟಿಕೆಟ್ ನೀಡದೆ ಬಿಎಸ್‌ವೈ ಅನ್ಯಾಯ: ಆರೋಪ
ಕ.ಪ್ರ.ವಾರ್ತೆ, ಕಡೂರು, ಮಾ.26 ಕೆಜೆಪಿಯನ್ನು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ತಳಮಟ್ಟದಿಂದ ಕಟ್ಟಿದ್ದ ತಮಗೆ ಯಡಿಯೂರಪ್ಪನವರು ವಿಧಾನಸಭೆಯ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಕೆಜೆಪಿ ತಾಲೂಕು ಅಧ್ಯಕ್ಷ ಕಾಮನಕೆರೆ ಶಶಿಧರ್ ಆರೋಪಿಸಿದರು.
ಅವರು ಕಡೂರು ತಾಲೂಕು ಕಾಮನಕೆರೆಯ ಕಂಬದ ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನೊಣಂಬ ವೀರಶೈವ ಸಮಾಜದ ಸಭೆಯಲ್ಲಿ ಮಾತನಾಡಿ, ಹಲವು ವರ್ಷದಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನೊಳಂಬ ವೀರಶೈವ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಬಲಿಷ್ಠ ಕೋಮುಗಳು ಸಮುದಾಯಕ್ಕೆ ಯಾವುದೇ ಅವಕಾಶ ನೀಡದೆ ಶೋಷಿಸುತ್ತಾ ಬಂದಿವೆ ಎಂದರು.
ಪ್ರಾತಿನಿಧ್ಯವಿಲ್ಲ: ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯ ನೀಡದೆ ಈ ಸಮಾಜ ಹಿಂದುಳಿಯಲು ಕಾರಣವಾಗಿದೆ. ನಾನು ಎರಡು ಬಾರಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಕ್ಷೇತ್ರದ ಹಳ್ಳಿಹಳ್ಳಿಗಳನ್ನು ಸುತ್ತಿ ಪಕ್ಷದ ಏಳಿಗೆ ಸಂಘಟನೆಗೆ ಶ್ರಮಿಸಿದ ನನ್ನ ನಿಸ್ವಾರ್ಥ ಸೇವೆಯನ್ನು ಗುರುತಿಸಲಿಲ್ಲ.
ಉಪ ಚುನಾವಣೆಯಲ್ಲೂ ಬಿಜೆಪಿಯಿಂದ ಕಡೂರು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ನೀಡದ ಯಡಿಯೂರಪ್ಪನವರು ಮುಂದೆ ಅವಕಾಶ ನೀಡುವುದಾಗಿ ಹೇಳಿ ಸಮಾಧಾನ ಮಾಡಿದರು ಎಂದರು.
ಅನಂತರ ಕೆಜೆಪಿ ತಾಲೂಕು ಸಂಚಾಲಕನಾಗಿ ತಮ್ಮನ್ನು ಆಯ್ಕೆ ಮಾಡಿದ್ದರಿಂದ ತಾವು ಪಕ್ಷ ಸಂಘಟನೆ ಮಾಡಿ ವಿವಿಧ ಪಕ್ಷಗಳ ಮುಖಂಡರನ್ನು ಕೆಜೆಪಿಗೆ ಸೇರ್ಪಡೆ ಮಾಡುವುದು, ಸದಸ್ಯತ್ವ ನೋಂದಾವಣಿ ಸೇರಿದಂತೆ ಅನೇಕ ಕಾರ್ಯ ಮಾಡಿದಾಗ ಕೆಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿದ್ದ ರ್ಬಿಸ್‌ವೈ ಇದೀಗ ದಿಢೀರ್ ಎಂದು ಕೆಜೆಪಿಯಿಂದ ಜಿಲ್ಲಾ ಅಧ್ಯಕ್ಷರ ಮತ್ತಿತರ ಪ್ರಭಾವಿಗಳ ಚಿತಾವಣೆಯಿಂದ ಬೇರೆಯವರನ್ನು ಪಕ್ಷದ ಅಭ್ಯರ್ಥಿನ್ನಾಗಿ ಘೋಷಿಸಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಂದಿನ ನಡೆ ಬಗ್ಗೆ ಚರ್ಚೆ: ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರೊಂದಿಗೆ ಸಮಾಲೋಚಿಸುವ ಮೂಲಕ ಸಮಾಜದ ಮುಂದಿನ ನಡೆ ಬಗ್ಗೆ ಚರ್ಚಿಸಲಾಗುತ್ತಿದೆ. ನಾನು ಕೆಜೆಪಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲಿದ್ದು, ಮುಂದೆ ನಮ್ಮ ಸಮಾಜ ಸೂಚಿಸುವ ರೀತಿಯಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಶಿಧರ್ ಹೇಳಿದರು. ಮುಖಂಡ ಎಸ್.ಜಿ. ಕೊಪ್ಪಲು ಗಂಗಾಧರ್, ಶಿವರುದ್ರಪ್ಪ, ಪಂಚಾಕ್ಷರಯ್ಯ, ಸಿದ್ರಾಮಪ್ಪ ಮೊದಲಾದವರು ಮಾತನಾಡಿದರು. ಪರಮೇಶ್ವರಪ್ಪ, ಎಸ್.ಆರ್. ಚಂದ್ರಪ್ಪ, ಮಹಾಲಿಂಗಪ್ಪ, ಮಹೇಶ್ವರಪ್ಪ, ಕೆ.ಜಿ. ಪ್ರಸನ್ನ, ಈಶ್ವರಪ್ಪ ಹಾಗೂ ಸಮಾಜದವರು ಉಪಸ್ಥಿತರಿದ್ದರು.