ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿಗೆ 12.50 ಕೋಟಿ ಬಿಡುಗಡೆ

Rashmi Kasaragodu
Updated On : 27 Mar 2013, 10:49 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ.26
ರಾಜ್ಯದ ನಕ್ಸಲ್ ಪೀಡಿತ 5 ಜಿಲ್ಲೆಗಳ 9 ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ 12.50 ಕೋಟಿ ಬಿಡುಗಡೆ ಮಾಡಿದೆ.
8 ತಾಲೂಕುಗಳಿಗೆ ತಲಾ 125 ಲಕ್ಷ ಬಿಡುಗಡೆ ಮಾಡಿದ್ದರೆ, ಕೊಪ್ಪ ತಾಲೂಕಿಗೆ 250 ಲಕ್ಷ ಬಿಡುಗಡೆ ಮಾಡಿದೆ. ತುಮಕೂರು ಜಿಲ್ಲೆಯ ಪಾವಗಡ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಹಾಗೂ ದಕ್ಷಿಣ ಕನ್ನಡ ತಾಲೂಕುಗಳಿಗೆ ತಲಾ 125 ಲಕ್ಷ ಬಿಡುಗಡೆ ಮಾಡಲಾಗಿದೆ.
ಮಾ.16ರಂದು ಬಿಡುಗಡೆ: ರಾಜ್ಯದ ನಕ್ಸಲ್ ಬಾಧಿತ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯದ 5 ಜಿಲ್ಲೆಗಳಿಗೆ 35 ಕೋಟಿ ಮಂಜೂರು ಮಾಡಲಾಗಿತ್ತು. ಮೊದಲ ಕಂತಿನಲ್ಲಿ ಪ್ರತಿ ತಾಲೂಕಿಗೆ ತಲಾ 250 ಲಕ್ಷದಂತೆ ರು. 22.50 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಕಂತಿನಲ್ಲಿ ತಲಾ 250 ಲಕ್ಷ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ, ತಲಾ 125 ಲಕ್ಷದಂತೆ 12.50 ಕೋಟಿಗಳನ್ನು ಮಾ.16ರಂದು ಬಿಡುಗಡೆ ಮಾಡಲಾಗಿದೆ.
ಹಣ ಬಳಕೆಯ ಬಗ್ಗೆ ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ನೀಡಬೇಕು. ಬಿಡುಗಡೆಯಾದ ಈ ಅನುದಾನವನ್ನು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿಟ್ಟುಕೊಂಡು ಅಗತ್ಯತೆಗೆ ಅನುಗುಣವಾಗಿ ವೆಚ್ಚ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಮೂಲಭೂತ ಸೌಲಭ್ಯ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕಂದಾಯ ಮತ್ತು ಪೊಲೀಸ್ ಇಲಾಖೆ ರಸ್ತೆ, ಕುಡಿಯುವ ನೀರು, ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳ ಬಗ್ಗೆ ಜಂಟಿಯಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದು, ಇದರ ಆಧಾರದ ಮೇಲೆ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಇದನ್ನು ಬಳಕೆ ಮಾಡಿರುವ ಸಂಬಂಧಿಸಿದಂತೆ ವರದಿಯನ್ನು ಸರ್ಕಾರಕ್ಕೆ ನೀಡಬೇಕಾಗಿದೆ.
  ಎರಡನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇದರ ಬಳಕೆಯ ನಂತರವಷ್ಟೇ ಮೂರನೇ ಕಂತಿನ ಹಣ ಬಿಡುಗಡೆಯಾಗಲಿದೆ.
ಅಭಿವೃದ್ಧಿಗೆ ಕ್ರಮ: ಮಲೆನಾಡು ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ವಿಷಯವನ್ನು ಮುಂದೆ ಮಾಡಿ ನಕ್ಸಲೀಯರು ತಮ್ಮ ನೆಲೆಯನ್ನು ಕಂಡುಕೊಂಡಿದ್ದರು.
  ಈ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿದರೆ ಈ ಸಮಸ್ಯೆ ನಿವಾರಣೆಯಾಗಬಹುದೆಂಬುದನ್ನು ಅರಿತ ಸರ್ಕಾರ ಆಡಳಿತ ಯಂತ್ರದ ಮೂಲಕ ಈ ಭಾಗದಲ್ಲಿ ಪರಿಶೀಲನೆ ನಡೆಸಿ ಅದರ ಆಧಾರದ ಮೇಲೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಕೆಲಸ ಪ್ರಥಮದಲ್ಲಿ ಜಿಲ್ಲಾ ಪಂಚಾಯ್ತಿಗೆ ವಹಿಸಲಾಗಿತ್ತು. ಆದರೆ, ಉದ್ದೇಶಿತ ಕಾರ್ಯಕ್ರಮ ಫಲಪ್ರದವಾಗದೆ ಇದ್ದರಿಂದ ಜಿಲ್ಲಾಡಳಿತಕ್ಕೆ ಸರ್ಕಾರ ಈ ಹಣವನ್ನು ಬಿಡುಗಡೆ ಮಾಡುತ್ತಿದೆ.


ನಕ್ಸಲ್ ಪೀಡಿತ
ಜಿಲ್ಲೆ ಹಾಗೂ ತಾಲೂಕು
ತುಮಕೂರು........ ಪಾವಗಡ
ಶಿವಮೊಗ್ಗ....... ತೀರ್ಥಹಳ್ಳಿ
                  .......ಹೊಸನಗರ
ಚಿಕ್ಕಮಗಳೂರು..... ಶೃಂಗೇರಿ
                        ..ಮೂಡಿಗೆರೆ
                        .........ಕೊಪ್ಪ
ಉಡುಪಿ................ ಕಾರ್ಕಳ
             ...........ಕುಂದಾಪುರ
ದಕ್ಷಿಣ ಕನ್ನಡ .......ಬೆಳ್ತಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement