ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವಿಧ ಇಲಾಖೆ ಕಡತ ಪರಿಶೀಲಿಸಿದ ಲೋಕಾಯುಕ್ತ

Rashmi Kasaragodu
Updated On : 27 Mar 2013, 10:52 am

ಕ.ಪ್ರ.ವಾರ್ತೆ ಟಿ ನ.ರಾ. ಪುರ ಟಿ  ಮಾ.26
ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ. ರಾಜು ಅವರ ನೇತೃತ್ವದ ತಂಡ ಮಂಗಳವಾರ ತಾಲೂಕು ಕಚೇರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಗೆ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಮುತ್ತಿನಕೊಪ್ಪ ಗ್ರಾಮದ ಮಂಜುನಾಥ ಮತ್ತು ನಾರಾಯಣ ಎಂಬ ಕುಟುಂಬದವರಿಗೆ ಬಿಪಿಎಲ್ ಕಾರ್ಡು ಬದಲಿಗೆ ಎಪಿಎಲ್ ಕಾರ್ಡು ನೀಡಲಾಗಿತ್ತು. ಇದನ್ನು ಬದಲಾಯಿಸಿ ಕೊಡಿ ಎಂದು ಎರಡು ತಿಂಗಳಿಂದ ತಾಲೂಕು ಕಚೇರಿಗೆ ಅಲೆದರೂ ಕಾರ್ಡು ಬದಲಾಯಿಸಿ ಕೊಡಲಿಲ್ಲ ಎಂದು ಆ ಕುಟುಂಬದವರು ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತರು ಪರಿಶೀಲನೆ ನಡೆಸಿದರು.
ಭರವಸೆ: ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿದಾರರ ಕುಟುಂಬದ ಮಹಿಳೆಯರೊಡನೆ ಚರ್ಚೆ ನಡೆಸಿದರು. ತಕ್ಷಣ ಬಿಪಿಎಲ್ ಕಾರ್ಡು ನೀಡಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.
ಸಾಲೂರು ಗ್ರಾಮದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆ ಗ್ರಾಮದವರು ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಸಮ್ಮುಖದಲ್ಲಿ ಆ ಸರ್ವೆ ನಂಬರಿನ ದಾಖಲಾತಿ ಪರಿಶೀಲನೆ ಮಾಡಲಾಯಿತು. ನಂತರ ದಾಖಲೆಯನ್ನು ಅರಣ್ಯ ಇಲಾಖೆಗೆ ಕಳುಹಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಪ್ರಸನ್ನ ವಿ.ರಾಜು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕ್ರಮಕ್ಕೆ ಸೂಚನೆ; ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ರೈತರಿಗೆ ನೀಡುವ ಸಹಾಯಧನ ಕಡತಗಳನ್ನು ಪರಿಶೀಲನೆ ನಡೆಸಿದರು. ತಾಪಂ ಸಿಇಒ ವಿಜಯಕುಮಾರ್ ಅವರಿಗೆ ಬಾಳೆಹೊನ್ನೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ ಕಾಮಗಾರಿ, ಮಾರಮ್ಮ ದೇವಸ್ಥಾನದ ಪಕ್ಕದಲ್ಲಿ ಕಟ್ಟುತ್ತಿರುವ ಕಟ್ಟಡದ ಬಗ್ಗೆ ಹಾಗೂ ಬಸ್ಸು ನಿಲ್ದಾಣದ ಸಮೀಪದ ಹೋಟೆಲ್‌ನಿಂದ ಹೊರಗೆ ಬರುತ್ತಿರುವ ಕೊಳಚೆ ನೀರಿನ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ತಂಡದಲ್ಲಿ ಇನ್ಸ್‌ಪೆಕ್ಟರ್ ವಿನಯ್, ಸಿಬ್ಬಂದಿಗಳಾದ ಚಂದ್ರಶೇಖರ್, ಓಂಕಾರಪ್ಪ, ಅಶೋಕ್, ಪ್ರಸನ್ನ, ಕೃಷ್ಣನಾಯಕ್ ಪಾಲ್ಗೊಂಡಿದ್ದರು.
ಸಾರ್ವಜನಿಕರ ನಿರಾಸಕ್ತಿ: ಸಾರ್ವಜನಿಕರ ಸಮಸ್ಯೆ ಬಗ್ಗೆ ಲೋಕಾಯುಕ್ತರು ಪ್ರವಾಸಿ ಮಂದಿರದಲ್ಲಿ ಅರ್ಜಿ ಸ್ವೀಕಾರ ಮಾಡಲಿದ್ದಾರೆ ಎಂದು ಈ ಮೊದಲೇ ಪತ್ರಿಕೆಗಳ ಮೂಲಕ ತಿಳಿಸಿದ್ದರೂ ಒಂದೇ ಒಂದು ಅರ್ಜಿ ಬರದೆ ಸಾರ್ವಜನಿಕರು ನಿರಾಸಕ್ತಿ ತೋರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement