ಸಾಹಿತ್ಯದ ವಿದ್ಯಾರ್ಥಿ ಸಂವೇದನೆಯ ಪ್ರತಿನಿಧಿ
ಕ.ಪ್ರ.ವಾರ್ತೆ, ಕೊಪ್ಪ, ಮಾ. 26 ಸಾಹಿತ್ಯದ ವಿದ್ಯಾರ್ಥಿಗಳು ಸಂವೇದನೆಯ ಪ್ರತಿನಿಧಿಗಳಾಗಿದ್ದು, ಅವರ ಚಿಂತನೆಗಳು ಸಮಾಜಮುಖಿಯಾಗಿರಬೇಕು ಇಲ್ಲದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವೇ ಇಲ್ಲ ಎಂದು ನ.ರಾ. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳೀಮಠ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ ಸಾಹಿತ್ಯ ಸಂಘದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಸಂವೇದನಾ ಶೀಲತೆಯಿಂದ ಕೂಡಿದ್ದು, ಹತ್ತನೇ ಶತಮಾನದಿಂದಲೂ ಇವತ್ತಿನವರೆಗೂ ಸಾಹಿತಿಗಳು ಕವಿಗಳು ತಮ್ಮ ಬರಹದ ಮೂಲಕ ಸಮಾಜವನ್ನು ಸದಾ ಜಾಗೃತವಾಗಿಡಲು ಸಾಧ್ಯವಾಗಿದ್ದು ಎಂದರು.
ಸಂಘರ್ಷದ ಕೈಗನ್ನಡಿ: ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ. ಶ್ರೀಪತಿ ಹಳಗುಂದ ಗೋವಿನ ಹಾಡು ಕವಿತೆ ವರ್ಗ ಸಂಘರ್ಷದ ಕೈಗನ್ನಡಿ. ಹಸುವಿನ ಮಾಂಸಕ್ಕಾಗಿ ಹಾತೊರೆಯುವ ಹುಲಿ ಪ್ರಸ್ತುತ ವ್ಯವಸ್ಥೆಗೆ ಸಾಕ್ಷಿ. ಹುಲಿ ತನ್ನನ್ನಾ ತಾನು ಸಾಯಿಸಿಕೊಳ್ಳುವುದು ವೈಭವೀಕರಣ ಎನಿಸಿದರೂ ಪ್ರಾಯಶ್ಟಿತ್ತಕ್ಕೆ ಜೀವಂತ ಉದಾಹರಣೆ ಎಂದರು. ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಕೆ.ಸಿ. ವೆಂಕಟೇಶ್ ವಹಿಸಿದ್ದರು. ಮಂಜುಳ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು. ಅನುಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.