ಜ್ಞಾನಕ್ಕೂ ಕಲೆಗೂ ಅವಿನಾಭಾವ ಸಂಬಂಧ
ಕ.ಪ್ರ. ವಾರ್ತೆ ಶಿವಮೊಗ್ಗ ಮಾ.27
ಜ್ಞಾನಕ್ಕೂ ಕಲೆಗೂ ಅವಿನಾಭಾವ ಸಂಬಂಧ. ಅಜ್ಞಾನಿಯಲ್ಲೂ ಸುಪ್ತ ಜ್ಞಾನ ಇರುತ್ತೆ. ಕಲಾವಿದರು, ಪ್ರತಿಭಾವಂತರು ಇರುವುದರಿಂದಲೇ ನಮ್ಮ ನಡುವೆ ಸುಸಂಸ್ಕೃತರು ಇದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ರಂಗಾಯಣ ಹಾಗೂ ಕಲಾವಿದರು ಒಕ್ಕೂಟ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಂಗಶತಕ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಅವರು, ಜ್ಞಾನ ಎನ್ನುವುದು ಕೇವಲ ವೈಜ್ಞಾನಿಕ ಸಾಧನೆ ಅಲ್ಲ. ಆತ್ಮದ ಸತ್ವ ಎಂದರು.
ರಂಗಭೂಮಿ ಮೂಲಕ ನಮ್ಮ ಕಲೆ ಸಂಸ್ಕೃತಿ ನಾಗರಿಕತೆಯನ್ನು ಉತ್ಕೃಷ್ಟಗೊಳಿಸುವುದು ಸಾಧ್ಯ. ನಾಟಕ ಪ್ರದರ್ಶನದಿಂದ ಕಲೆಗಳನ್ನೂ ಊರ್ಚಿತಗೊಳಿಸಬಹುದು ಎಂದರು.
ಗುಲ್ಬರ್ಗದಲ್ಲಿಯೂ ರಂಗಾಯಣ ಘಟಕ ಆರಂಭವಾಗಲಿದೆ ಎಂದ ಅವರು, ಮೈಸೂರು ರಂಗಾಯಣದಲ್ಲಿ ಸಿದ್ಧಪಡಿಸಿದ್ದ ಮಲೆಗಳಲ್ಲಿ ಮಧುಮಗಳು ನಾಟಕವು ಬೆಂಗಳೂರಿನ ಕಲಾಗ್ರಾಮದಲ್ಲಿಯೂ ಸಿದ್ಧಗೊಳ್ಳುತ್ತಿದೆ. ಇದು 8 ಗಂಟೆಗಳ ನಾಟಕ ಎಂದರು.
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಕಲಾವಿದರು ಒಕ್ಕೂಟದ ಅಧ್ಯಕ್ಷ ಪ್ರೊ. ಎಸ್.ಸಿ. ಗೌರಿಶಂಕರ್ ಮಾತನಾಡಿದರು. ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಎನ್. ಹರಿಕುಮಾರ್ ವಂದಿಸಿದರು.
ರಂಗನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಅವರು 2013ರ ವಿಶ್ವ ರಂಗಭೂಮಿ ಸಂದೇಶ ನೀಡಿರುವ ಇಟಲಿಯ ನಾಟಕಕಾರ ದಾರಿಯೋ ಫೋ ಅವರ ಸಂದೇಶವನ್ನು ವಾಚನ ಮಾಡಿದರು.