ನಕಲಿ ಲೋಕಾಯುಕ್ತ ಅಧಿಕಾರಿ ಬಂಧನ
ಕ.ಪ್ರ.ವಾರ್ತೆ ಟಿ ಕಡೂರು ಟಿ ಮಾ.27
ಲೋಕಾಯುಕ್ತರು ಎಂದು ಹೇಳಿಕೊಂಡು ಕಂದಾಯ ಇಲಾಖೆಯ ವಿವಿಧ ಅಧಿಕಾರಿ ನೌಕರರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಕಂದಾಯ ವಿಭಾಗದವರ ಸಹಕಾರದಿಂದ ಚಿಕ್ಕಮಗಳೂರು ಲೋಕಾಯುಕ್ತ ಪೋಲೀಸರು ಬಂಧಿಸುವ ಮೂಲಕ ನಕಲಿ ಲೋಕಾಯುಕ್ತ ವ್ಯಕ್ತಿಯು ಪೋಲೀಸರ ಅತಿಥಿಯಾಗಿರುವ ಘಟನೆ ಕಡೂರಿನಲ್ಲಿ ನಡೆದಿದೆ.
ತಾಲೂಕು ಗಿರಿಯಾಪುರದ ಮಂಜುನಾಥ ಎಂಬುವನೇ ನಕಲಿ ಲೋಕಾಯುಕ್ತ ಸಿಬ್ಬಂದಿಯಾಗಿದ್ದು ಇದೀಗ ಕಡೂರು ಪೋಲೀಸರ ವಶದಲ್ಲಿರುವ ವ್ಯಕ್ತಿಯಾಗಿದ್ದಾನೆ.
10 ಸಾವಿರಕ್ಕೆ ಬೇಡಿಕೆ: ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರನ್ನು ಹೆದರಿಸುತ್ತಿದ್ದ ಮಂಜುನಾಥ್ ಬುಧವಾರ ಸಂಜೆ ಹಿರೇನಲ್ಲೂರು ಕಂದಾಯ ಇಲಾಖೆಯ ರವಿನ್ಯೂ ಇನ್ಸ್ಪೆಕ್ಟರ್ ಮೂರ್ತಿ ಎಂಬುವರ ಬಳಿ ಬೆಂಗಳೂರು ಲೋಕಾಯುಕ್ತರ ಬಳಿ ನಿಮ್ಮ ಮೇಲೆ ದೂರು ದಾಖಲಾಗಿದೆ. ಅದನ್ನು ವಾಪಸ್ ಪಡೆಯಬೇಕಾದರೆ ನೀವು 10 ಸಾವಿರ ರು.ನಗದು ನೀಡಬೇಕು ಎಂದು ಕೇಳಿದ್ದಾನೆ.
ನಂತರ ಮತ್ತೊಬ್ಬ ಕಂದಾಯ ಅಧಿಕಾರಿ ವೇಣು ಎಂಬುವರ ಬಳಿ 50 ಸಾವಿರ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ ಚೌಳಹಿರಿಯೂರಿನ ಮಂಜುನಾಥ್ ಎಂಬ ರೆವಿನ್ಯೂ ಅಧಿಕಾರಿಯ ತಮ್ಮನ ಅಂಕಪಟ್ಟಿಯಲ್ಲಿರುವ ದೋಷ ಸರಿಪಡಿಸಲು 50 ಸಾವಿರ ರು. ನೀಡುವಂತೆ ಒತ್ತಾಯಿಸುವ ಜೊತೆ, ನಾನು ಮತ್ತು ನಮ್ಮ ಸಾಹೇಬರು ಓಡಾಡಲು ನಿಮ್ಮ ಕಾರು ನೀಡಬೇಕು ಎಂದು ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.
ನಿಜವಾದ ಅನುಮಾನ: ಈತ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದುದರಿಂದ ಅನುಮಾನಗೊಂಡ ರೆವಿನ್ಯೂ ಇನ್ಸ್ಪೆಕ್ಟರ್ ಮೂರ್ತಿ, ಕಿರಣ್ ಮತ್ತು ಮತ್ತೊಬ್ಬ ಕಂದಾಯಾಧಿಕಾರಿ ಸೇರಿಕೊಂಡು ಕಡೂರಿನ ಹಳೇ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಆತನನ್ನು ಕೂರಿಸಿ ಎಲ್ಲರೂ ಸೇರಿ ಒಟ್ಟಿಗೆ ಹಣ ನೀಡುವುದಾಗಿ ಹೇಳಿ ಚಿಕ್ಕಮಗಳೂರು ಲೋಕಾಯುಕ್ತರಿಗೆ ಈ ಬಗ್ಗೆ ತಿಳಿಸಿದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾದ
ಚಿಕ್ಕಮಗಳೂರಿನ ಲೋಕಾಯಕ್ತ ಡಿವೈಎಸ್ಪಿ ಪಿ.ಪ್ರಸನ್ನ ವಿ.ರಾಜು, ಇನ್ಸ್ಪೆಕ್ಟರ್ ರಾಜು, ಸಿಬ್ಬಂದಿಗಳಾದ ಉಮೇಶ್, ಪ್ರಸನ್ನ ಸೇರಿದಂತೆ ಲೋಕಾಯುಕ್ತ ಪೋಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.
ಆತನನ್ನು ಬಂಧಿಸಿದ ಲೋಕಾಯುಕ್ತರು ರಾತ್ರಿ 9.20 ರವರೆಗೆ ವಿಚಾರಣೆ ನಡೆಸಿ ನಂತರ ಆತನನ್ನು ಕಡೂರು ಪೋಲೀಸರ ವಶಕ್ಕೆ ನೀಡಿ ಮುಂದಿನ ವಿಚಾರಣೆಗೆ ಹಸ್ತಾಂತರಿಸಿದ್ದಾರೆ. ಇದೀಗ ಮಂಜುನಾಥ ಕಡೂರು ಪೊಲೀಸರ ಅತಿಥಿಯಾಗಿದ್ದಾನೆ.