ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ
ಕ.ಪ್ರ.ವಾರ್ತೆ, ಕಡೂರು, ಮಾ.27 ರಾಜ್ಯದ 224 ಕ್ಷೇತ್ರಗಳಲ್ಲಿ ಜೆಡಿಎಸ್ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಕಣಕ್ಕಿಳಿಯುವ ಮೂಲಕ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ರಾಜ್ಯ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಹೇಳಿದರು.
ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲೆಡೆ ಬಿಜೆಪಿ ದುರಾಡಳಿತದಿಂದ ಬೇಸತ್ತು ರಾಜ್ಯದ ಜನ ಜೆಡಿಎಸ್ ಬೆಂಬಲಿಸುತ್ತಿರುವ ಲಕ್ಷಣಗಳೇ ಹೆಚ್ಚಾಗಿ ಗೋಚರಿಸುತ್ತಿರುವುದು ಜೆಡಿಎಸ್ಗೆ ಆಶಾದಾಯಕ ಸೂಚನೆ ನೀಡಿದೆ ಎಂದವರು ಹೇಳಿದರು.
ಜನರಿಗೆ ಆತಂಕ: ರಾಜ್ಯದ ಜನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಣಿಯಂತೆ ನಡೆದ ಹಗರಣಗಳ ಸರಮಾಲೆ ನೋಡಿ ಆಂತಕದ ಜೊತೆ ಬಿಜೆಪಿಯನ್ನು ಕಿತ್ತೊಗೆಯಲು ಮನಸ್ಸು ಮಾಡಿರುವುದು ಜೆಡಿಎಸ್ಗೆ ಅನುಕೂಲವಾಗಲಿದೆ ಎಂದರು.
ಈ ಬಾರಿ ರಾಜ್ಯದ ಎಲ್ಲೆಡೆ ಜೆಡಿಎಸ್ಗೆ ಉತ್ತಮ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ 8 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ದತ್ತ ವಿಶ್ವಾಸ ವ್ಯಕ್ತಪಡಿಸಿದರು.