ವಿಪ್ರ ಸಮ್ಮೇಳನಕ್ಕೆ ಭರದ ಸಿದ್ಧತೆ
ಶೃಂಗೇರಿ: ಮಾರ್ಚ್ 30 ಹಾಗೂ 31ರಂದು ಪಟ್ಟಣದ ರಾಜಾನಗರ ವಿದ್ಯಾಭಾರತೀ ಸಭಾ ಭವನದಲ್ಲಿ ನಡೆಯಲಿರುವ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಸಮ್ಮೇಳನಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. 30ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿವಿಧ ಗೋಷ್ಠಿಗಳು ನಡೆಯಲಿದೆ. 31ರಂದು ಕಾರ್ಯಕ್ರಮ ಮುಂದುವರೆಯಲಿದೆ. ವಿವಿಧ ಗೋಷ್ಠಿಗಳು, ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ವಿದ್ಯುತ್ ಕಡಿತ ತಡೆಗೆ ಆಗ್ರಹ
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂದು ತಾಲೂಕು ರೈತ ಸಂಘ, ಹಸಿರು ಸೇನೆ ಆಗ್ರಹಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ವೋಲ್ಟೇಜ್ ಇಲ್ಲದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. ಪದೇ ಪದೇ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏ.2ಕ್ಕೆ ಕೋಳಿ ಪರೇವು
ತರೀಕೆರೆ: ಮಾರಿಗದ್ದಿಗೆ ಅಮ್ಮನವರ ಸೇವಾ ಸಮಿತಿಯಿಂದ ಏಪ್ರಿಲ್ 2ರಂದು ಪಟ್ಟಣದ ಇತಿಹಾಸ ಪ್ರಸಿದ್ಧ ಶಕ್ತಿ ದೇವತೆ ಮಾರಿಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ಉತ್ತಮ ಮಳೆಬೆಳೆಗಾಗಿ ಪ್ರಾರ್ಥಿಸಿ, ಕೋಳಿ ಪರೇವು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾರಿಗದ್ದಿಗೆ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ಎಸ್.ಬಿ.ನೀಲಕಂಠಪ್ಪ ತಿಳಿಸಿದ್ದಾರೆ.
ಅದೇ ದಿನ ಮಧ್ಯಾಹ್ನ 1-30ಕ್ಕೆ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಥಟ್ ಅಂತ ಹೇಳಿಯಲ್ಲಿ ಪ್ರಥಮ ಬಹುಮಾನ
ನರಸಿಂಹರಾಜಪುರ: ತಾಲೂಕಿನ ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬೆಂಗಳೂರಿನ ದೂರದರ್ಶನ ಕೇಂದ್ರದ ಚಂದನವಾಹಿನಿಯ ಥಟ್ ಅಂತ ಹೇಳಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ಸ್ಫರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಆರ್. ಮೇಘಾ, ಬಿ.ಕೆ ಸುಗಮ್, ಕೆ.ಜಿ. ಅನಿಶ್ ಭಾರದ್ವಾಜ್ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಾದ ಅರುಣ್ ಮತ್ತು ಎಚ್.ಎಂ. ರಾಹುಲ್ ಸಹ ಭಾಗವಹಿಸಿದ್ದರು.