ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೊಸತನಕ್ಕೆ ಕಾಯುತ್ತಿದೆ ಹೊಯ್ಸಳ ಕ್ರೀಡಾಂಗಣ

Rashmi Kasaragodu
Updated On : 28 Mar 2013, 10:52 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಮಾ.27
ತಾಲೂಕಿಗೆ ಇರುವ ಕ್ರಿಡಾಂಗಣ ಹೊಯ್ಸಳ ಕ್ರೀಡಾಂಗಣ. ಅದರೆ ಈ ಕ್ರೀಡಾಂಗಣದ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಅವ್ಯವಸ್ಥೆಯ ಅಗರವಾಗಿದ್ದರೂ ಯುವಜನ ಇಲಾಖಾ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ.  
ತಾಲೂಕಿನಲ್ಲಿ ಯಾವುದೇ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕಿದ್ದರೆ ಹೊಯ್ಸಳ  ಕ್ರೀಡಾಂಗಣದಲ್ಲೇ ನಡೆಯುವುದು. ಆದರೆ ಈ ಕ್ರೀಡಾಂಗಣದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಿಂದ ಹರಿದು ಬರುವ ಮಲಮೂತ್ರಗಳ ವಾಸನೆ ಕುಡಿಯುವುವುದು ಅನಿವಾರ್ಯವಾಗಿದೆ.
ಉದ್ಘಾಟನೆಯೇ ಆಗಿಲ್ಲ: 2007-08 ರಲ್ಲಿ ರು. 3 ಲಕ್ಷ ಅಂದಾಜು ಮೊತ್ತದಲ್ಲಿ ಕ್ರೀಡಾಂಗಣದಲ್ಲಿ ನಿರ್ಮಾಣವಾದ ಮಲ್ಟಿ ಜಿಮ್ ಕಟ್ಟಡ ಇಂದಿನವರೆಗೂ ಉದ್ಘಾಟನೆಯಾಗದೇ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಇಡೀ ಕಟ್ಟಡವೇ ಅವನತಿ ಹಂತ ತಲುಪಿದೆ.  
ಈ ಕ್ರೀಡಾಂಗಣ 2 ಧ್ವಜಸ್ಥಂಭ ಹೊಂದಿದ್ದು, ರಾಜ್ಯದಲ್ಲೇ ಪ್ರಥಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆದು ಕ್ರೀಡೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲು ಹಾಕಿರುವ ಫೈಬರ್ ಶೀಟ್‌ಗಳು ಗಾಳಿ ಮಳೆಯಿಂದ ಕಿತ್ತು ಹೋಗಿದೆ. ಕ್ರೀಡಾಂಗಣದ ಕಬ್ಬಿಣದ ಗೇಟುಗಳು ಕಾಣೆಯಾಗಿದ್ದು, ಕ್ರೀಡಾಂಗಣದ ನಿರ್ವಹಣೆ ಮರಿಚಿಕೆಯಾಗಿದೆ. ಸದರಿ ಕ್ರೀಡಾಂಗಣ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೇಗೆ ಒಳಪಟ್ಟಿದ್ದು, ಇದರ ನಿರ್ವಹಣೆ ಮಾತ್ರ ಇಲ್ಲದಂತಾಗಿದೆ.
ಅವ್ಯವಸ್ಥೆ: ಸುಸಜ್ಜಿತ ಆಟದ ಮೈದಾನವೆಂದರೆ ಶೌಚಾಲಯದ ವ್ಯವಸ್ಥೆ ಇರಬೇಕು. ಆದರೆ ಈ ಕ್ರೀಡಾಂಗಣದಲ್ಲಿ ಶೌಚಾಲಯದ ವ್ಯವಸ್ಥೆ ಮರಿಚಿಕೆಯಾಗಿದೆ. ಮಳೆಗಾಲದಲ್ಲಿ ನೀರು ಕ್ರಿಡಾಂಗಣದಲ್ಲೇ ನಿಲ್ಲುತ್ತಿದ್ದು. ನೀರು ಸರಾಗವಾಗಿ ಹರಿದು ಹೋಗದ ಕಾರಣ ಕ್ರೀಡಾಂಗಣ ಕೆಸರುಮಯವಾಗಿದೆ.
ಇದರ ಬಗ್ಗೆ ಸಂಬಧಿಸಿದ ಅಧಿಕಾರಿಗಳು ಗಮನ ಹರಿಸದೇ ಕಣ್ಣುಮುಚ್ಚಿ ಕುಳಿತಿದ್ದಾರೆ. ಸಂಜೆ ನಂತರ ಅನೈತಿಕ ಚಟುವಟಿಕೆ ಕಾರಣವಾಗಬಹುದಾಗಿದ್ದು, ಇದಕ್ಕೆ ಯಾವುದೇ ಅಡೆತಡೆಗಳಿಲ್ಲ. ತಾಲೂಕು ಮಟ್ಟದ ಕ್ರೀಡೆಗಳಿಗೆ ಬರುವಂತಹ ಸ್ಪರ್ಧಾಳುಗಳಿಗೆ ಯಾವುದೇ ಸೌಕರ್ಯವಿಲ್ಲದೆ ತಾವು ಬಂದಂತಹ ವಾಹನಗಳಲ್ಲೆ ಬಟ್ಟೆ ಬರೆಗಳನ್ನು ಬದಲಾಯಿಸಿಕೊಳ್ಳುವುದರೊಂದಿಗೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ವಿಷಜಂತುಗಳೋಡಾಟ: ಕ್ರಿಡಾಂಗಣದ ಸುತ್ತಲೂ ಪೊದೆಗಳು ಬೆಳೆದು ನಿಂತಿದ್ದು, ಹಾವುಗಳಂತಹ ವಿಷ ಜಂತು  ಓಡಾಡುತ್ತಿವೆ. ರಾತ್ರಿ ಸಮಯದಲ್ಲಿ ಕುಡಿದ ಬಾಟಲಿಗಳನ್ನು ಕ್ರಿಡಾಂಗಣದಲ್ಲಿ ಎಲ್ಲೆಂದರಲ್ಲೆ ಎಸೆಯುತ್ತಿದ್ದು, ಅಶುಚಿತ್ವದಿಂದ ಕೂಡಿದೆ.
 ಕ್ರೀಡಾಂಣದಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಮ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಆಗಮಿಸುವ ರಾಜಕಾರಣಿಗಳು ಉದ್ಘಾಟನೆ ನಡೆಸಿ ರಾಜಕೀಯ ಭಾಷಣವನ್ನು ಮಾಡಿ ಹೊರಹೋಗುತ್ತಾರೆ. ಆದರೆ ಕ್ರೀಡಾಂಗಣದ ಅಭಿವೃದ್ಧಿ ಮಾಡಲು ಮಾತ್ರ ಹಿಂದೇಟು ಹಾಕಿದ್ದು ಒಂದು ದುರಂತ.
ಸುಸ್ಸಜ್ಜಿತ ಕ್ರೀಡಾಂಗಣ: ಈ ಕ್ರಿಡಾಂಗಣವನ್ನು ಮೇಲ್ದರ್ಜೆಗೇರಿಸಲು 2011ರಲ್ಲಿ ಅಂದಾಜು ಪಟ್ಟಿಯನ್ನು ಬೆಂಗಳೂರಿನ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದ್ದು. 2012 ರಲ್ಲಿ ಅನುಮೋದನೆ ದೊರೆತಿತ್ತು. ಶಾಸಕ ಎಂ.ಪಿ. ಕುಮಾರಸ್ವಾಮಿಯವರ ಹೋರಾಟದ ಫಲವಾಗಿ ಸರ್ಕಾರದಿಂದ ರು. 70 ಲಕ್ಷ ಬಿಡುಗಡೆಗೊಂಡಿದೆ.
ಚುನಾವಣೆ ನಂತರ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಕ್ರೀಡಾಂಗಣ ಸಿದ್ಧವಾಗಲಿದೆ ಎಂದು ಮಾಹಿತಿ ಹಕ್ಕಿನ ಮೂಲಗಳು ಹಾಗೂ ಅಧಿಕಾರಿಗಳ ತಂಡಗಳು ತಿಳಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement