ತರೀಕೆರೆಗಿಲ್ಲ ಸುಸಜ್ಜಿತ ಕ್ರೀಡಾಂಗಣ
ಅನಂತ ನಾಡಿಗ್
ಕ.ಪ್ರ.ವಾರ್ತೆ, ತರೀಕೆರೆ, ಮಾರ್ಚ್. 25 ಜಿಲ್ಲೆಯಲ್ಲೇ ದೊಡ್ಡ ಊರು ಎಂದು ಖ್ಯಾತಿ ಪಡೆದಿರುವುದರೊಂದಿಗೆ ಹಲವು ಶಿಕ್ಷಣ ಕೇಂದ್ರವನ್ನೂ ಹೊಂದಿರುವ ತರೀಕೆರೆಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣವಿಲ್ಲ.
ಕಂದಾಯ ವಿಭಾಗದಲ್ಲಿ ಜಿಲ್ಲೆಯಲ್ಲೇ ಬಹುದೊಡ್ಡ ಉಪ ಉಪವಿಭಾಗ ತರೀಕೆರೆ. ಜನಸಂಖ್ಯೆಯಲ್ಲಿ, ಶ್ರೀಮಂತಿಕೆಯಲ್ಲಿ, ಹೃದಯವಂತಿಕೆಯಲ್ಲಿ ಬಹುದೊಡ್ಡ ಖ್ಯಾತಿ ಪಡೆದ ಊರು. ಅತಿರಥ, ಮಹಾರಥರೆಲ್ಲಾ ಶಾಸಕರಾಗಿ, ಸಚಿವರಾದರು. ಆದರೇನು ಜಿಲ್ಲೆಯಲ್ಲಿ ತರೀಕೆರೆ ಕ್ರೀಡಾಂಗಣ ಇಲ್ಲದ ಊರೆಂಬ ಅಕ್ಷೇಪಣೆಯನ್ನು ಬೆನ್ನಿಗೇ ಅಂಟಿಸಿಕೊಂಡಿದೆ.
ಶಿಕ್ಷಣ ಕೇಂದ್ರ: ತರೀಕೆರೆ ಪಟ್ಟಣ ಇಂದು ದೊಡ್ಡ ಶಿಕ್ಷಣ ಕೇಂದ್ರವಾಗಿ ಬೆಳೆದು ನಿಂತಿದೆ. ಒಂದು ಸರ್ಕಾರಿ ಒಂದು ಖಾಸಗಿ ಪ್ರಥಮ ದರ್ಜೆ ಕಾಲೇಜು, ಬಾಲಕ ಬಾಲಕಿಯರ ಪದವಿಪೂರ್ವ ಕಾಲೇಜು, ಹಲವಾರು ಮಾದರಿ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಸರ್ಕಾರಿ ಮತ್ತು ಖಾಸಗಿ ಐ.ಟಿ.ಐ.ತರಬೇತಿ ಕೇಂದ್ರವಿದೆ, ಅಂತಾರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳ ಬಹುದೊಡ್ಡ ಪಟ್ಟಿಯೇ ತರೀಕೆರೆಯಲ್ದಿದೆ.
ಆಗಾಗ್ಗೆ ಪಂದ್ಯಗಳು: ಬಹಳ ಹಿಂದಿನಿಂದಲೂ ತರೀಕೆರೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಂದ್ಯಗಳನ್ನು ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಮಟ್ಟದಲ್ಲಿ ಅದು ಹೊನಲು ಬೆಳಕಿನಲ್ಲಿ ಮತ್ತು ಹಗಲಾಟಗಳಲ್ಲೂ ವಿವಿಧ ರೀತಿಯ ಪಂದ್ಯಗಳನ್ನು ನಡೆಸಿದೆ.
ಕಬ್ಬಡಿ, ವಾಲಿಬಾಲ್, ಥ್ರೋಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್, ಕರಾಟೆ, ಕೋಕೋ ಇತ್ಯಾದಿ ಅನೇಕ ಪಂದ್ಯಗಳನ್ನು ಪಟ್ಟಣದ ಕ್ರೀಡಾ ಸಂಘ ಸಂಸ್ಥೆಗಳು ಯಶಸ್ವಿಯಾಗಿ ನಡೆಸಿದೆ. ಮರಳು ತುಂಬಿದ ಎತ್ತಿನ ಗಾಡಿ ಸ್ಪರ್ಧೆಗಳಿಂದ ಹಿಡಿದು ಕುರಿಕಾಳಗ, ಕೋಳಿ ಕಾಳಗ, ಇನ್ಡೋರ್ ಹಾಗು ಔಟ್ಡೋರ್ ಇತ್ಯಾದಿ ಗ್ರಾಮೀಣ ಕ್ರೀಡಾಕೂಟವನ್ನು ಅಷ್ಟೇ ಸೊಗಸಾಗಿ -ಶಿಸ್ತು ಬದ್ದವಾಗಿ ನಡೆಸುವುದರಲ್ಲಿ ತರೀಕೆರೆ ಮೇಲುಗೈ ಸಾಧಿಸಿದೆ.
ಇಷ್ಟೇ ಸಾಲದೆಂಬಂತೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಂತರರಾಜ್ಯ ಕಾಲೇಜು ಪಂದ್ಯಾಟಗಳು ಲೆಕ್ಕವಿಲ್ಲದಷ್ಟು ನಡೆಯುತ್ತಿವೆ. ಆದರೆ ಇವ್ಯಾವ ಕ್ರೀಡಾ ಪಂದ್ಯಾಟಗಳಿಗೂ ಕ್ರೀಡಾಂಗಣ ಇಲ್ಲವೇ ಇಲ್ಲ
ಮಿಂಚಿದ ಕ್ರೀಡಾಪಟುಗಳು: ಸ್ಥಳೀಯ ಮತ್ತು ಗ್ರಾಮೀಣ ಭಾಗದ ಹಲವು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಿ ತರೀಕೆರೆಗೆ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.
ದುರ್ದೈವವೆಂದರೆ ಇಷ್ಟೆಲ್ಲಾ ಸಾಧನೆಗಳಿದ್ದರೂ ತರೀಕೆರೆಗೆ ಒಂದು ಸುಸಜ್ಚಿತವಾದ ಮತ್ತು ಸುರಕ್ಷಿತವಾದ ಕ್ರೀಡಾಂಗಣವಿಲ್ಲ ಎಂದರೆ ನಿಜಕ್ಕೂ ದೌರ್ಭಾಗ್ಯದ ಸಂಗತಿಯೇ ಸರಿ.
ದೊಡ್ಡ ಮಟ್ಟದಲ್ಲಿ ಕ್ರೀಡಾಪಂದ್ಯಗಳನ್ನು ನಡೆಸುವಾಗ ಪಟ್ಟಣದ ಕ್ರೀಡಾ ಸಂಸ್ಥೆಗಳಿಗೆ ಸಾಕು ಬೇಕಾಗುತ್ತದೆ. ಶಾಮಿಯಾನ- ಕುರ್ಚಿ- ವಿದ್ಯುತ್, ವೇದಿಕೆ ಇತ್ಯಾದಿಗಳಿಗಾಗಿಯೇ ಸಾವಿರಾರು ರು.ಗಳನ್ನು ತಾತ್ಕಾಲಿಕ ಕ್ರೀಡಾಂಗಣ ನಿರ್ಮಿಸಲು ವ್ಯಯ ಮಾಡಬೇಕಾಗುತ್ತದೆ.
2 ಬಾರಿ ಹಣ ಮಂಜೂರು: ತರೀಕೆರೆ ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವಂತೆ ಯುವ ಸಮೂಹದ, ಕ್ರೀಡಾಭಿಮಾನಿಗಳು ಸಂಘ ಸಂಸ್ಥೆಗಳ ಮನವಿ ಪುರಸ್ಕರಿಸಿದ ಸರ್ಕಾರ ಯುವಜನ ಸೇವಾ ಇಲಾಖೆಯ ಮೂಲಕ ಮೊದಲ ಬಾರಿಗೆ ರು. 14 ಲಕ್ಷ ಮತ್ತು ಎರಡನೇ ಬಾರಿಗೆ ರು. 22 ಲಕ್ಷ ಮಂಜೂರು ಮಾಡಿ ಆದೇಶವನ್ನೂ ನೀಡಿತ್ತು.
ಆದರೆ ಆದೇನು ಕೊರತೆಯೋ ಗೊತ್ತಿಲ್ಲ ಕ್ರೀಡಾಂಗಣ ನಿರ್ಮಾಣವಾಗದೇ ಮಂಜೂರಾದ ಹಣ ಸರ್ಕಾರಕ್ಕೆ ವಾಪಸಾಗಿದೆ ಎಂದು ತಿಳಿದು ಬಂದಿದೆ. ಕ್ರೀಡಾಂಗಣ ನಿರ್ಮಿಸಲು ಯುವ ಜನ ಸೇವಾ ಇಲಾಖೆ ಸಹ ಉತ್ಸುಕತೆ ತೋರಿದೆ ಆದರೆ ಅಂತಹ ಸುಮೂಹೂರ್ತವೇ ತರೀಕೆರೆ ಪಟ್ಟಣಕ್ಕೆ ಒದಗಿ ಬಂದಿಲ್ಲ.
ಕೃತಕ ವ್ಯವಸ್ಥೆ: ಸದ್ಯ ಪಟ್ಟಣದಲ್ಲಿ ಏನಾದರೂ ಕ್ರೀಡಾಪಂದ್ಯಗಳು ವ್ಯವಸ್ಥೆಯಾದರೆ, ಯಾವುದಾದರೂ ಶಾಲಾ- ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಿ ಉರಿಯುವ ಬಿಸಿಲಿನಲ್ಲೋ ಅಥವಾ ಸುರಿಯುತ್ತಿರುವ ಮಳೆಯ ನಡುವೆಯೋ ಕೃತಕ ಕ್ರೀಡಾ ವ್ಯವಸ್ಥೆ ಮಾಡಿಕೊಂಡು ನಿರ್ವಹಿಸಬೇಕಾಗಿದೆ.
ತರೀಕೆರೆಯಲ್ಲಿ ಯುವಕರಿಗೆ ಕ್ರೀಡಾಭಿಮಾನಿಗಳಿಗೆ ಒಂದು ಸುಸಜ್ಜಿತವಾದ ಕ್ರೀಡಾಂಗಣ ಅಗತ್ಯವಾಗಿದೆ ಎಲ್ಲರೂ ಒಪ್ಪುತ್ತಾರೆ, ಕಾಲಕಾಲಕ್ಕೆ ಈ ಬಗ್ಗೆ ಕ್ರೀಡಾಂಗಣ ಇನ್ನೇನು ಆಗಿಯೋ ಹೋಯಿಚು
ಎಂದು ಆಸೆ ಹುಟ್ಟಿಸುತ್ತಾರೆ-ಆದರೆ ಕ್ರೀಡಾಂಗಣ ಮಾತ್ರ ಇಲ್ಲಿಯವರೆಗೂ ನಿರ್ಮಾಣವಾಗಿಲ್ಲ.