ಪರಾರಿಯಾಗಿದ್ದ ಆರೋಪಿಗಳ ಬಂಧನ
ಕ.ಪ್ರ.ವಾರ್ತೆ, ಕಡೂರು, ಮಾ.28 ಕಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿರುವ ಕಡೂರು ಪೋಲೀಸರು ರು. 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಡೂರು ಸಮೀಪದ ಎಮ್ಮೇದೊಡ್ಡಿಯ ಚಂದ್ಯಾನಾಯ್ಕ ಮತ್ತು ಬೇಲೂರು ಸಮೀಪದ ಅರೇಹಳ್ಳಿಯ ಪೀರ್ ಸಾಬ್ ಎಂಬುವರು ಬಂಧಿತರು.
ಚಂದ್ಯಾನಾಯ್ಕ ಶಿವಮೊಗ್ಗದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದು, ಕಡೂರು ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಇವರಿಬ್ಬರನ್ನೂ ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.
2011ರಲ್ಲಿ ಕಡೂರಿನಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಬಂಧಿತರಾಗಿರುವ ಇಬ್ಬರೂ ಆರೋಪಿಗಳಿಂದ ಒಟ್ಟು 112 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಬಾಲಚಂದ್ರೇಗೌಡ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಹೇಳಿದರು.
ನೇಣು ಬಿಗಿದು ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕು ಯಗಟಿ ಹೋಬಳಿಯ ಗುಜ್ಜೇನಹಳ್ಳಿಯಲ್ಲಿ ನಡೆದಿದೆ.
ಗುಜ್ಜೇನಹಳ್ಳಿಯ ರಂಗಪ್ಪ ಎಂಬುವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ತೊಲೆಗೆ ನೇಣು ಹಾಕಿಕೊಂಡಿದ್ದು, ಅದನ್ನು ನೋಡಿದ ಆತನ ಪತ್ನಿ ಗೀತಾ ಅಕ್ಕಪಕ್ಕದವರ ಸಹಾಯದಿಂದ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ.
ಈ ಬಗ್ಗೆ ಆತನ ತಂದೆ ಗಿಡ್ಡಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ತರೀಕೆರೆ ಡಿವೈಎಸ್ಪಿ ಸದಾನಂದ ನಾಯಕ್, ಬೀರೂರು ವೃತ್ತ ನೀರಿಕ್ಷಕ ಎಸ್.ಪಿ. ಮಂಜಪ್ಪ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣದ ದಾಖಲಿಸಿಕೊಂಡಿರುವ ಬೀರೂರು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಅತ್ಯಾಚಾರಿಗೆ 7 ವರ್ಷ ಜೈಲು
ಚಿಕ್ಕಮಗಳೂರು: ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ.
2008ರ ಮಾ.8ರಂದು ಚಿಕ್ಕಮಗಳೂರು ತಾಲೂಕಿನ ಕಬ್ಬಿಗೆರೆ ಗ್ರಾಮದಲ್ಲಿ ಬಾಲಕಿಯು ಮನೆಯಲ್ಲಿ ಒಂಟಿಯಾಗಿರುವಾಗ ಅದೇ ಊರಿನ ಲೋಹಿತ್ ಎಂಬುವವನು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಬಲತ್ಕಾರವಾಗಿ ಅತ್ಯಾಚಾರ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾ. ಎಸ್.ಬಿ. ವಸ್ತ್ರಮಠ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಲೋಹಿತನಿಗೆ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಅಶೋಕ್.ಎನ್. ನಾಯ್ಕ ಮೊಕದ್ದಮೆಯನ್ನು ನಡೆಸಿದ್ದರು.